ನಟ ರಮೇಶ್ ಅರವಿಂದ್ ಕಳೆದ ಆರೇಳು ತಿಂಗಳಿನಲ್ಲಿ ಆರು ಚಿತ್ರಗಳಲ್ಲಿ ನಟಿಸಿದ್ದಾರಂತೆ. ತಮ್ಮ ಈ ನಟನಾ ಸಾಮರ್ಥ್ಯವನ್ನು ಪ್ರೀತಿಯಿಂದ ಖುಷಿಯಾಗಿ ಸ್ವತಃ ಅವರೇ ಹೇಳಿಕೊಳ್ಳುತ್ತಾರೆ.
'ಪ್ರೀತಿಯಿಂದ ರಮೇಶ್' ಚಿತ್ರ ಸೆಟ್ಟೇರಿದ್ದು, ಇದು ಹೊಸಥರದ ಅನುಭವ ನೀಡುತ್ತೆ ಎನ್ನುತ್ತಾರೆ ರಮೇಶ್. ಈ ಹಿಂದೆ ಬಿಡುಗಡೆಯಾದ `3 ಗುಟ್ಟು1ನಿಜ1 ಸುಳ್ಳು ಹಾಗೂ ರಿಲೀಸ್ ಅಗಬೇಕಿರುವ ಕ್ರೇಜಿ ಕುಟುಂಬ ಚಿತ್ರಗಳೆರಡರಲ್ಲೂ ರಮೇಶ್‌ಗೆ ಹಳ್ಳಿಗನ ಪಾತ್ರ ಸಿಕ್ಕಿತ್ತು. ಆದರೆ ಪ್ರೀತಿಯಿಂದ ರಮೇಶ್ ಚಿತ್ರದಲ್ಲಿ ಮಾತ್ರ ಪಕ್ಕಾ ಮಾಡರ್ನ್ ರೋಲ್ ದೊರೆತಿರುವುದು ಅವರ ಸಂತೋಷಕ್ಕೆ ಬೋನಸ್ ಸಿಕ್ಕಂತಾಗಿದೆ.
ಪ್ರೀತಿಯಿಂದ ರಮೇಶ್ ಚಿತ್ರ ಇಂಟರ್ನೆಟ್ ಪ್ರೇಮದ ಕಂಪನ್ನು ಹೊಂದಿದ್ದು, ಇದಕ್ಕಾಗಿ ನಿರ್ದೇಶಕ ಗುಣಕುಮಾರ್ ಅಂತರ್ಜಾಲವನ್ನೆಲ್ಲ ಜಾಲಾಡಿ ಮಾಹಿತಿ ಕಲೆ ಹಾಕಿ ಕಥೆ ಸಿದ್ದಪಡಿಸಿದ್ದಾರಂತೆ. ಕಥೆ ಕೇಳಿದ್ದೆ ತಡ ಇಗಿನ ಟ್ರೆಂಡಿಗೆ ಸರಿಹೊಂದುವ ಸಿನಿಮಾ ಎಂದು ರಮೇಶ್ ಮರುಮಾತಾಡದೆ ನಟಿಸಲು ಒಪ್ಪಿಕೊಂಡರಂತೆ.
ಅರವಿಂದ್ ಜೊತೆಯಲ್ಲಿ ಸುಮ ಗುಹಾ ಮತ್ತು ರಮಣೀತೋ ಚೌಧರಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಮೇಶ್ ಅವರಿಗೆ ಹೆಚ್ಚು ಸಹಿ ಹಾಕುವ ದೃಶ್ಯಗಳಿವೆಯಂತೆ. ಅವರ ಆ ಸಹಿಯಲ್ಲಿ ಪ್ರೀತಿಯಿಂದ ರಮೇಶ್ ಎಂದು ಬರೆಯುತ್ತಾರಂತೆ. ಹಾಗಾಗಿ ಅದನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಆರಿಸಿಕೊಂಡಿದ್ದಾರಂತೆ. ಈಗಾಗಲೇ ಪ್ರೀತಿಯಿಂದ ರಮೇಶ್ ಎಂಬ ಸಂದರ್ಶನ ಕಾರ್ಯಕ್ರಮವನ್ನು ಖಾಸಗಿ ಚಾನಲ್‌ವೊಂದರಲ್ಲಿ ಸ್ವತಃ ರಮೇಶ್ ನಡೆಸಿಕೊಡುತ್ತಿದ್ದರು. ಆ ಜನಪ್ರಿಯ ಕಾರ್ಯಕ್ರಮದ ಹೆಸರನ್ನೇ ಮತ್ತೆ ರಮೇಶ್ ಚಿತ್ರಕ್ಕೆ ಇಟ್ಟುಕೊಳ್ಳುವ ಮೂಲಕ ಮತ್ತೆ ಜನಮೆಚ್ಚುಗೆ ಗಳಿಸಿಕೊಳ್ಳುವ ಇರಾದೆ ಇದ್ದರೂ ಇರಬಹುದು ಎಂದು ಗಾಂಧಿನಗರ ಮಾತಾಡಿಕೊಳ್ಳುತ್ತಿದೆ.