'ಯಾರ್ರೀ ಹೇಳಿದ್ದು ಅದು ಐಟಂ ಸಾಂಗ್ ಅಂತ?' ಹಾಗೆನ್ನುತ್ತಾ ಸ್ವಲ್ಪ ಹೆಚ್ಚೇ ಸಿಟ್ಟಾದರು ನಿರ್ದೇಶಕ ಪ್ರಕಾಶ್. ಅವರು ಮಾತನಾಡಿದ್ದು ಗೋಕುಲ ಚಿತ್ರದಲ್ಲಿ ರಾಗಿಣಿ ಸ್ಟ್ಟೆಪ್ ಹಾಕಿದ ಹಾಡಿನ ಬಗ್ಗೆ. ಎಲ್ಲರೂ ಆ ಹಾಡನ್ನು ಐಟಂಸಾಂಗ್ ಎಂದೇ ಬಿಂಬಿಸಿದ್ದಾರೆ. ಇದೇ ಕಾರಣದಿಂದ ರಾಗಿಣಿಯವರಿಗೆ ಒಂದು ಸಿನಿಮಾ ಪ್ರಾಜೆಕ್ಟೇ ತಪ್ಪಿಹೋಯಿತು. ಈ ಬಗ್ಗೆ ಪ್ರಕಾಶ್ ತಮ್ಮ ವಿಷಾದ ಭರಿತ ಆಕ್ರೋಶವನ್ನು ಹೊರಹಾಕಿದರು.
MOKSHA
ಈಗ್ಗೆ ಕೆಲವೇ ದಿನಗಳ ಹಿಂದಷ್ಟೆ ದರ್ಶನ್ ನಾಯಕತ್ವದ ಚಿತ್ರದಲ್ಲಿ ರಾಗಿಣಿಗೆ ನಾಯಕಿ ಪಾತ್ರ ದೊರೆತಿತ್ತು. ಆಗ ರಾಗಿಣಿ ಗೋಕುಲ ಚಿತ್ರದ ಐಟಂ ಹಾಡಿನಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಸುದ್ದಿ ಕೇಳಿದಾಕ್ಷಣ ದರ್ಶನ್, ಐಟಂ ಹಾಡಿನಲ್ಲಿ ನಟಿಸಿದ ಹುಡುಗಿ ನನ್ನ ಚಿತ್ರದ ನಾಯಕಿಯಾಗೋದು ಬೇಡ ಎಂದು ನಿರ್ಮಾಪಕರಿಗೆ ತಾಕೀತು ಮಾಡಿದರು. ಹಾಗೆ ರಾಗಿಣಿ ಹೆಸರು ಲಿಸ್ಟಿನಿಂದ ಹೊರಬಿತ್ತು. ರಾಗಿಣಿ ಗೋಕುಲ ಚಿತ್ರದ ಒಂದು ಹಾಡಿನಿಂದಾಗಿ ದರ್ಶನ್ ನಾಯಕತ್ವದ ಚಿತ್ರವನ್ನೇ ಕಳೆದುಕೊಳ್ಳಬೇಕಾಗಿತ್ತು.
ರಾಗಿಣಿ ಮೇಲೆ ತಪ್ಪು ಆರೋಪ ಹೊರಿಸಲಾಗಿದೆ ಎಂದು ಕಳಕಳಿ ವ್ಯಕ್ತ ಪಡಿಸುತ್ತಾರೆ ಪ್ರಕಾಶ್. ಅದು ಐಟಂ ಹಾಡಲ್ಲ. 'ನನ್ನ ಈ ಹಿಂದಿನ ಚತ್ರಗಳಾದ ಖುಷಿ, ಶ್ರೀ, ಮಿಲನ ಚಿತ್ರಗಳಲ್ಲಿ ಇದ್ದ ರೀತಿಯದ್ದೇ ಗೋಕುಲ ಚಿತ್ರದ ಒಂದು ವಿಶೇಷ ಹಾಡಷ್ಟೆ. ಅದು ಐಟಂ ಹಾಡೇ ಆಗಿದ್ದರೆ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫೀಕೆಟ್ ಹೇಗೆ ಸಿಗುತ್ತಿತ್ತು? ಇದರ ಬಗ್ಗೆ ಹೆಚ್ಚು ಚರ್ಚಿಸಲು ನನಗೆ ಇಷ್ಟವಿಲ್ಲ' ಎಂದು ಕಿಡಿ ಕಾರುತ್ತಾ ತಮ್ಮ ಮಾತು ಮುಗಿಸಿದರು.