ನಟ ಸುದೀಪ್ ಈ ಹಿಂದೆ ಬಾಲಿವುಡ್ಡಿನ ಫೂಂಕ್ ಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಚಿತ್ರಗಳಿಗೆ ಪಾದಾರ್ಪಣೆ ಮಾಡಿದ್ದು ಗೊತ್ತೇ ಇದೆ. ಆ ಚಿತ್ರ ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡದಿದ್ದರೂ ಆ ಚಿತ್ರದಲ್ಲಿನ ಸುದೀಪ್ ಅವರ ನಟನೆ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗಿತ್ತು. ರಾಮ್ಗೋಪಾಲ್ ವರ್ಮಾರ ಸಿನಿಮಾ ಆದ್ದರಿಂದ ಬಾಲಿವುಡ್ಡಿನ ಹಲವರು ಚಿತ್ರ ನೋಡಿ ಸುದೀಪ್ ಅವರ ಬಗ್ಗೆ ಮೆಚ್ಚುಗೆ ಮಾತಾಡಿದ್ದರು. ಈಗ ಅದೇ ಮೆಚ್ಚುಗೆ ಅವರನ್ನು ಫೂಂಕ್ 2 ಮತ್ತು ರಣ್ ಎಂಬ ಇನ್ನೆರಡು ಚಿತ್ರಗಳಲ್ಲಿ ನಟಿಸುವಂತೆ ಮಾಡಿತು.
ಅದೊಮ್ಮೆ ನಮ್ಮ ಕಿಚ್ಚ ಫೂಂಕ್ 2 ಚಿತ್ರದ ಶೂಟಿಂಗಿನಲ್ಲಿ ನಿರತರಾಗಿದ್ದಾಗ ಅವರ ಸ್ನೇಹಿತರೊಬ್ಬರು ಅಲ್ಲಿಗೆ ಆಗಮಿಸಿ ಅವರನ್ನು ಕರೆದುಕಂಡು ಶಾರುಖ್ ಖಾನ್ ನಿವಾಸಕ್ಕೆ ಹೊದರಂತೆ. ನನ್ನನ್ನು ಇಲ್ಲಿಗೆ ಕರೆತರಲು ಕಾರಣವೇನು ಎಂಬ ಪ್ರಶ್ನೆಗೆ ಮಾತ್ರ ಸುದೀಪ್ಗೆ ಉತ್ತರ ಸಿಕ್ಕಿರಲಿಲ್ಲ. ಆಗ ಸ್ವತಃ ಶಾರುಖ್ಖಾನ್, 'ನಿನ್ನ ರಣ್ ಚಿತ್ರದ ಪ್ರೋಮೋಗಳನ್ನು ನೋಡಿದೆ. ಅಮಿತಾಭ್ ಜೊತೆ ನಿನ್ನ ನಟನೆ ನಿಜಕ್ಕೂ ಪೈಪೋಟಿ ಕೊಟ್ಟಂತಿತ್ತು' ಎಂದು ಸುದೀಪ್ ಮನದಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರಿಸಿದರಂತೆ. ಶಾರುಖ್ ಸ್ವತಃ ತಾನೇ ಸುದೀಪ್ಗೆ ಹೀಗೆ ಹೇಳಿದ್ದು ಕೇಳಿ ಸುದೀಪ್ ಉಬ್ಬಿ ಹೋದರಂತೆ. ಇದಕ್ಕಿಂತ ಭಾಗ್ಯ ನನಗಿನ್ನೇನು ಬೇಕು ಎಂದುಕೊಂಡು ಸುದೀಪ್ ಔತಣ ಕೂಟ ಮುಗಿಸಿಕೊಂಡು ಹೊರಬಂದರು.
ಸುದೀಪ್ ಈಗ ಬಾಲಿವುಡ್ ಮೆಟ್ಟಿಲನ್ನು ಒಂದೊಂದಾಗಿ ಹತ್ತುತ್ತಿದ್ದಾರೆ. ನಿರ್ದೇಶನಕ್ಕೂ ಹಿಂದಿಯಿಂದ ಆಹ್ವಾನ ಬಂದಿದೆ. ತ್ನದೇ ಚಿತ್ರವನ್ನು ಹಿಂದಿಯಲ್ಲಿ ನಿರ್ದೇಶಿಸುವ ಕನಸನ್ನೂ ಹೊತ್ತಿದ್ದಾರೆ. ಆದರೆ ಈಗಾಗಲೇ ಕೆಲವು ಕನ್ನಡದ ನಟರು ಅವಕಾಶಕ್ಕಾಗಿ ಹಿಂದಿ ಚಿತ್ರರಂಗಕ್ಕೆ ತೆರಳಿ ವಾಪಸ್ ಆಗಿದ್ದ ಉದಾಹರಣೆ ಕಣ್ಮುಂದೆಯೇ ಇದೆ. ಹಾಗಾಗಿಯೋ ಏನೋ, ಸುದೀಪ್ ಬುದ್ಧಿವಂತಿಕೆಯಿಂದ ಹಿಂದಿಯತ್ತ ಹೆಜ್ಜೆಯಿಡುತ್ತಿರುವುದನ್ನು ಕನ್ನಡ ಚಿತ್ರರಂಗವೇ ನೋಡುತ್ತಿದೆ. ಸುದೀಪ್ಗೆ ಆಲ್ ದಿ ಬೆಸ್ಟ್!