'ಕೆಂಪೇಗೌಡ'ನಾಗಿ ಪೊಲೀಸ್ ಪಾತ್ರದಲ್ಲಿ ಯಶಸ್ವಿಯಾದ ಕಿಚ್ಚ ಸುದೀಪ್, ಕೇವಲ ಹನ್ನೆರಡು ಗಂಟೆಯಲ್ಲಿ ಚಿತ್ರೀಕರಿಸಲು ಸಿದ್ಧವಾಗಿರುವ 'ಪೊಲೀಸ್ ಸ್ಟೋರಿ-3' ಚಿತ್ರಕ್ಕೆ ಸೈ ಎಂದಿದ್ದಾರೆ. ಥ್ರಿಲ್ಲರ್ ಮಂಜು ಸೇರಿದಂತೆ ಆರುಜನ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆಗೆ ಅನುಮತಿ ಸಿಕ್ಕಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ 'ಸುಗ್ರೀವ' ಕೇವಲ ಹದಿನೆಂಟು ಗಂಟೆಯಲ್ಲಿ ಚಿತ್ರೀಕರಣ ನಡೆಸಿ ಇತ್ತೀಚೆಗಷ್ಟೆ ಲಿಮ್ಕಾ ವಿಶ್ವದಾಖಲೆಗೆ ಸೇರ್ಪಡೆಗೊಂಡಿತ್ತು.
ಸುದೀಪ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ನಾಲ್ವರು ಹೊಸಬರ ಸೇರ್ಪಡೆಯೊಂದಿಗೆ ಚಿತ್ರದ ತಾರಾಗಣದಲ್ಲಿ ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ಶೋಭರಾಜ್ ಮುಂತಾದವರಿದ್ದಾರೆ. ನಾಯಕಿಯರ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ.
ಎರಡೂ ಹಾಡುಗಳನ್ನು ಒಳಗೊಂಡಿರುವ 'ಪೊಲೀಸ್ ಸ್ಟೋರಿ-3'ಗೆ ಗುರುಚರಣ್ ಸಂಗೀತವಿದೆ. ಆರಂಭದಲ್ಲೇ ಏನಾದರೊಂದ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿರುವ ನಿರ್ಮಾಪಕ ಶಿವಾನಂದ್ ಅವರ ಈ ಪ್ರಯತ್ನಕ್ಕೆ ಸುದೀಪ್ ಬೆನ್ನುತಟ್ಟಿ ನಟನೆಗೆ ಒಪ್ಪಿಗೆ ಸೂಚಿಸಿದ್ದಾರೆ.