ರಾಜಕೀಯ ರಂಗ ಪ್ರವೇಶಿಸುವ ವಿಚಾರದಲ್ಲಿ ಕನ್ನಡ ಚಿತ್ರರಂಗದ ನಾಯಕ ನಟ ಹಾಗೂ ನಿರ್ದೇಶಕ ಸುದೀಪ್ ವಾರಕ್ಕೊಮ್ಮೆ ಪ್ಲೇಟ್ ಬದಲಾಯಿಸುತ್ತಲೇ ಇದ್ದಾರೆ. ಜನ ಸೇವೆ ಮಾಡಲು ಶೀಘ್ರದಲ್ಲೇ ರಾಜಕೀಯ ಕ್ಷೇತ್ರ ಪ್ರವೇಶಿಸುವ ಮೂಲಕ ಚಿತ್ರ ರಂಗಕ್ಕೆ ವಿದಾಯ ಹೇಳುತ್ತೇನೆ ಎಂದು ಎರಡು ವಾರಗಳ ಹಿಂದೆಯಷ್ಟೇ ಘೋಷಿಸಿದ್ದ ಸುದೀಪ್ 'ರಾಜಕೀಯ ಕ್ಷೇತ್ರಕ್ಕೆ ಹೋಗುವುದಿಲ್ಲ. ಚಿತ್ರರಂಗವೇ ನನ್ನ ಕಾರ್ಯ ಕ್ಷೇತ್ರ' ಎಂದು ಕಳೆದ ವಾರ ಪ್ಲೇಟ್ ಬದಲಾಯಿಸಿದ್ದರು.
'ನಾನು ರಾಜಕೀಯ ಪ್ರವೇಶಿಸುವ ಕಾಲ ಇನ್ನೂ ಸನ್ನಿಹಿತವಾಗಿಲ್ಲ. ಮುಂದೊಂದು ದಿನ ಕಾಲ ಕೂಡಿ ಬಂದರೆ ನೋಡೋಣ' ಎಂದು ಇದೀಗ ಬೆಳಗಾವಿಯಲ್ಲಿ ಸುದೀಪ್ ಹೊಸ ರಾಗ ಎಳೆದಿದ್ದಾರೆ.
'ಕೆಂಪೇಗೌಡ' ಚಿತ್ರದ ಪ್ರಚಾರಾರ್ಥ ಬೆಳಗಾವಿಗೆ ಆಗಮಿಸಿದ್ದ ಸುದೀಪ್ ಸುದ್ದಿಗಾರರ ಜೊತೆ ಮಾತನಾಡುತ್ತಾ 'ಚಿತ್ರರಂಗ ಹಾಗೂ ರಾಜಕೀಯ ರಂಗಕ್ಕೆ ಯಾವುದೇ ವ್ಯತ್ಯಾಸ ಇಲ್ಲ' ಎಂದೂ ಸಾರಿದರು. 'ಚಲನಚಿತ್ರದಲ್ಲಿ ಜನರ ಸಮಸ್ಯೆಗಳನ್ನು ಮನರಂಜನೆ ಮೂಲಕ ದೂರ ಮಾಡಲಾಗುತ್ತದೆ. ಇದೇ ರೀತಿ ರಾಜಕೀಯದಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ' ಎಂದರು ಸುದೀಪ್.
ರಾಜಕೀಯ ಸೇರಿರುವುದಾಗಿದ್ದರೆ ಈಗ ಉಪಚುನಾವಣೆ ಪ್ರಚಾರದಲ್ಲಿ ಇರುತ್ತಿದ್ದೆ. ಆದರೆ ಈಗ ನನ್ನ ಚಿತ್ರದ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿದ್ದು ರಾಜಕೀಯದ ಬಗ್ಗೆ ಸದ್ಯ ಚಿಂತನೆ ಮಾಡಿಲ್ಲ. ಯಾವುದಕ್ಕೂ ಸಮಯ ಬರಬೇಕು ಎಂದರು.
'ಕೆಂಪೇಗೌಡ' ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುವ ಚಿತ್ರ ತಂಡದ ಪ್ರವಾಸ ಕಾರ್ಯಕ್ರಮವನ್ನು ಈಗ ಬೆಳಗಾವಿಯಿಂದಲೇ ಆರಂಭಿಸುತ್ತಿದ್ದೇವೆ.
ಆ ನಂತರ ಧಾರವಾಡ, ಹುಬ್ಬಳ್ಳಿ, ದಾವಣಗೆರೆಗಳ ಪ್ರವಾಸ ಕೈಗೊಂಡು ನಂತರ ಮತ್ತೊಂದು ಬಾರಿ ರಾಜ್ಯದಲ್ಲಿ ಸುತ್ತಾಡಲಿದ್ದೇವೆ. ನಾಲ್ಕು ತಿಂಗಳ ಬಳಿಕ 'ಕೆಂಪೇಗೌಡ ಭಾಗ-2'ರ ಚಿತ್ರೀಕರಣ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗ ಚಿತ್ರಕಥೆ ಮತ್ತು ಸಂಭಾಷಣೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಎಂದು ಸುದೀಪ್ ತಿಳಿಸಿದರು.