ಕೆಂಪೇಗೌಡ ಸಿನಿಮಾ ಚಿತ್ರೀಕರಣಕ್ಕಾಗಿ ನಡೆಸಲಾದ ಬಾಂಬ್ ಸ್ಫೋಟದ ಲೆಕ್ಕಾಚಾರ ತಪ್ಪಿದ್ದರಿಂದ ಕಿಚ್ಚ ಸುದೀಪ್ ಗಾಯಗೊಂಡಿದ್ದಾರೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ.
ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ವೇಳೆ ಬಾಂಬ್ ಸ್ಫೋಟಗೊಳ್ಳುವ ದೃಶ್ಯವಿತ್ತು. ಇದರ ಚಿತ್ರೀಕರಣ ನಡೆಯುವ ಹೊತ್ತಿನಲ್ಲಿ ಅವಘಢ ಸಂಭವಿಸಿದೆ. ಸುದೀಪ್ ಅವರ ಕಾಲು ಮತ್ತು ಬೆನ್ನಿಗೆ ಗಾಯವಾಗಿದೆ.
ಮಂಡ್ಯದ ಮದ್ದೂರಿನ ತೈಲೂರು ಎಂಬಲ್ಲಿ ಸುದೀಪ್ ನಟನೆ-ನಿರ್ದೇಶನದ 'ಕೆಂಪೇಗೌಡ' ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸುದೀಪ್ ಅವರಿಂದ ಕೇವಲ ನಾಲ್ಕು ಅಡಿ ಅಂತರದಲ್ಲಿ ಬಾಂಬ್ ಸ್ಫೋಟಗೊಳಿಸಲಾಗಿತ್ತು. ಚಿತ್ರೀಕರಣಕ್ಕಾಗಿ ಬಳಸಲಾಗುವ ಬಾಂಬನ್ನೇ ಬಳಸಲಾಗಿದ್ದರೂ, ಅದರ ತೀವ್ರತೆ ಹೆಚ್ಚಿದ್ದ ಪರಿಣಾಮ ಅವಘಢ ನಡೆದಿದೆ.
ತಮಿಳಿನ 'ಸಿಂಗಂ' ರಿಮೇಕ್ ಚಿತ್ರವಾಗಿರುವ ಇದರ ಚಿತ್ರಕಥೆ ಪ್ರಕಾರ ಖಳರ ಜತೆಗಿನ ಗುಂಡಿನ ಚಕಮಕಿಯ ನಂತರ ಬಾಂಬ್ ಸ್ಫೋಟ ನಡೆಯಬೇಕಿತ್ತು. ಅದರಂತೆ ಡಮ್ಮಿ ಬಾಂಬ್ ಸ್ಫೋಟಗೊಳಿಸಲಾಗಿತ್ತು. ನಿರೀಕ್ಷೆಯಂತೆ ಪಕ್ಕದಲ್ಲಿದ್ದ ಮಣ್ಣಿನ ಮಡಕೆಗಳು ಒಡೆಯಬೇಕಿತ್ತು.
ಸ್ಫೋಟದ ತೀವ್ರತೆಗೆ ಮಣ್ಣಿನ ಮಡಕೆಯ ಚೂರುಗಳು ಸುದೀಪ್ ಅವರ ಕಾಲು ಮತ್ತು ಬೆನ್ನಿಗೆ ತಾಗಿದ್ದರಿಂದ ಗಾಯಗೊಂಡರು. ಅವರ ಬಲಗಾಲಿನ ಮೀನಖಂಡಕ್ಕೂ ಗಾಯವಾಗಿದೆ. ಆದರೂ ಆಸ್ಪತ್ರೆಗೆ ತೆರಳುವ ಬದಲು ಚಿತ್ರೀಕರಣ ಮುಂದುವರಿಸಲಾಗಿದೆ ಎಂದು ನಿರ್ಮಾಪಕ ಶಂಕ್ರೇಗೌಡ ತಿಳಿಸಿದ್ದಾರೆ.
ಸುದೀಪ್ ಅವರಿಗೆ ಗಂಭೀರ ಗಾಯವೇನೂ ಆಗಿಲ್ಲ. ಕಾಲು ಊದಿಕೊಂಡಿದೆ. ಚಿತ್ರೀಕರಣ ನಿಲ್ಲಿಸಿ ಚಿಕಿತ್ಸೆಗೆ ಹೋಗೋಣ ಎಂದರೂ ಸುದೀಪ್ ಕೇಳುತ್ತಿಲ್ಲ. ಕೊನೆಯ ಭಾಗವನ್ನು ಚಿತ್ರೀಕರಿಸಿದ ನಂತರವೇ ಆಸ್ಪತ್ರೆಗೆ ಹೋಗೋಣ ಎಂದು ಶೂಟಿಂಗ್ ಮುಂದುವರಿಸಿದ್ದಾರೆ. ಇನ್ನೇನು ಆಸ್ಪತ್ರೆಗೆ ಹೋಗುತ್ತೇವೆ ಎಂದು ಗೌಡರು ವಿವರಣೆ ನೀಡಿದ್ದಾರೆ.
ಚಿತ್ರೀಕರಣದ ವೇಳೆ ಇಂತಹ ಅವಘಢಗಳು ನಡೆಯದಂತೆ ಸಾಮಾನ್ಯವಾಗಿ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೂ ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಇದು ಚಿತ್ರತಂಡದ ನಿರ್ಲಕ್ಷ್ಯವಲ್ಲ ಎಂದು ಸಹನಟ ಯತಿರಾಜ್ ಪ್ರತಿಕ್ರಿಯಿಸಿದ್ದಾರೆ.