ಸಮಾಜದ ನೈಜ ಪ್ರಸಂಗಗಳನ್ನು ಸಿನಿಮಾ ಮಾಡಿ ಸೈ ಎನಿಸಿಕೊಂಡಿರುವ ಹಲವು ನಿರ್ದೇಶಕರಲ್ಲಿ ಪ್ರಮುಖರಾಗಿರುವ ಎಎಂಆರ್ ರಮೇಶ್ ಈಗ ರೌಡಿ ಶೀಟರ್ ರಾಡ್ ಶ್ಯಾಮ್ ಜೀವನಗಾಥೆಯನ್ನು ಬೆಳ್ಳಿತೆರೆಯ ಮೂಲಕ ಕನ್ನಡ ಜನತೆಗೆ ಪರಿಚಯಿಸಲಿದ್ದಾರೆ.
ಈ ರಾಡ್ ಶ್ಯಾಮ್ ಯಾರು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಈತ ಬರೋಬ್ಬರಿ 33 ಕೊಲೆಗಳನ್ನು ಮಾಡಿ, ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿರುವವನು. ಆತನ ಜೀವನದಲ್ಲಿ ನಡೆದ ನೈಜ ಘಟನೆಗಳು ರೋಚಕವಾಗಿವೆಯಂತೆ. ಅವುಗಳನ್ನು ಆಧರಿಸಿ ಚಿತ್ರ ಮಾಡಲು ಹೊರಟಿದ್ದಾರೆ ರಮೇಶ್.
ಈ ಚಿತ್ರಕ್ಕೆ 'ರಮ್ಮಿ' ಎಂದು ನಾಮಕರಣ ಮಾಡಿದ್ದಾರೆ. 33 ಮರ್ಡರುಗಳನ್ನು ಮಾಡಲು ಬಲವಾದ ಕಾರಣಗಳು ಇರಲೇಬೇಕು. ಅದನ್ನು ಬೆನ್ನು ಹತ್ತಿ ಹೋದಾಗ ನಿರ್ದೇಶಕ ರಮೇಶ್ ಥ್ರಿಲ್ ಆಗಿದ್ದಾರೆ. ಸಿನಿಮಾ ಮಾಡಲೇ ಬೇಕೆಂಬ ತುಡಿತ ಹೆಚ್ಚಾಗಿದೆ. ಅದಕ್ಕಾಗಿ ನಾಲ್ಕೈದು ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಶ್ಯಾಮ್‌ನನ್ನು ಭೇಟಿಯಗಿದ್ದಾರಂತೆ.
ರಾಡ್ ಶ್ಯಾಮ್ ಕಥೆ ಎಂದಾಕ್ಷಣ ಎಲ್ಲರೂ ಬೆಚ್ಚಿಬೀಳುವ ಅಗತ್ಯವಿಲ್ಲ. ಇದು ರೌಡಿ ಕುರಿತಾದ ಚಿತ್ರವಾಗಿದ್ದರೂ, ಲಾಂಗು-ಮಚ್ಚುಗಳ ವೈಭವ ಇರುವುದಿಲ್ಲ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಎಂದಿದ್ದಾರೆ ರಮೇಶ್.
ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ತಾವೇ ಹೊತ್ತಿದ್ದಾರೆ. ನಾಯಕಿ ನಟಿ ಶರ್ಮಿಳಾ ಮಾಂಡ್ರೆ ಎನ್ನುವುದು ಖಚಿತವಾಗಿದೆ. ಆದರೆ ನಾಯಕನ ಆಯ್ಕೆಯಲ್ಲಿ ಕೊಂಚ ಗೊಂದಲವಿದೆ. ಚಿರಂಜೀವಿ ಸರ್ಜಾ ಅಥವಾ ಒಲವೇ ಮಂದಾರ ಚಿತ್ರದ ನಾಯಕ ಶ್ರೀಕಾಂತ್ ಇಬ್ಬರಲ್ಲಿ ಒಬ್ಬರನ್ನು ನಾಯಕ ನಟನಾಗಿಸುವ ಯೋಚನೆ ನಿರ್ದೇಶಕರದ್ದು.
ಈ ಹಿಂದೆ ರಮೇಶ್ ಮಾಡಿದ್ದ 'ಸೈನೈಡ್' ಮತ್ತು 'ಪೊಲೀಸ್ ಕ್ವಾರ್ಟಸ್' ಚಿತ್ರಗಳು ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿತ್ತು.