ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬೆಂಗ್ಳೂರು ಹುಡ್ಗಿ ಜತೆ ಚೆಲುವಾಂತ ಚೆನ್ನಿಗ ಧ್ಯಾನ್ ಮದುವೆ (Dhyan | Sameer Dattani | Nanna Preethiya Hudugi | Ritika Jolly)
ಸುದ್ದಿ/ಗಾಸಿಪ್
Bookmark and Share Feedback Print
 
ಎರಡೆರಡು ದೋಣಿಗಳಲ್ಲಿ ಕಾಲಿಟ್ಟು ಅಲ್ಲೂ-ಇಲ್ಲೂ-ಎಲ್ಲೂ ಸಲ್ಲದೆ ಅತಂತ್ರನಾಗಿರುವ ಹಾಲುಗಲ್ಲದ ಚಾಕಲೇಟ್ ಹೀರೋ ಧ್ಯಾನ್ ಯಾನೆ ಸಮೀರ್ ದತ್ತಾನಿ ಮದುವೆಯಾಗುತ್ತಿದ್ದಾರೆ. ಬಾಲಿವುಡ್ ಅಥವಾ ಸ್ಯಾಂಡಲ್‌ವುಡ್‌ ಎರಡರಲ್ಲಿ ಒಂದರಲ್ಲಾದರೂ ಸ್ಥಿರವಾಗಿ ನೆಲೆಯೂರಲು ಯತ್ನಿಸಿ ವಿಫಲರಾದ ನಂತರ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ.
PR

ಧ್ಯಾನ್ ತನ್ನ ಬಾಲ್ಯ ಸ್ನೇಹಿತೆಯನ್ನೇ ಮದುವೆಯಾಗುವ ನಿಷ್ಠೆ ತೋರಿಸಿರುವುದು ವಿಶೇಷ. ಇದೇ ಶನಿವಾರ (ಡಿಸೆಂಬರ್ 18) ಮುಂಬೈಯ ಪಂಚತಾರಾ ಹೊಟೇಲೊಂದರಲ್ಲಿ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ಹುಡುಗಿಯ ಹೆಸರು ಋತಿಕಾ ಜೋಲಿ, ಸಾಫ್ಟ್‌ವೇರ್ ಇಂಜಿನಿಯರ್. ಇದು ಲವ್ ಮ್ಯಾರೇಜ್ ಮತ್ತು ಹುಡುಗಿ ಬೆಂಗಳೂರಿನವಳು ಎಂಬುದು ವಿಶೇಷ.

ಕಳೆದ ನಾಲ್ಕು ವರ್ಷಗಳಿಂದ ಋತಿಕಾ ಜತೆ ಸುತ್ತಾಡುತ್ತಿದ್ದ ಧ್ಯಾನ್, ಪ್ರೀತಿಗೆ ಅಧಿಕೃತ ಮುದ್ರೆಯನ್ನು ಒತ್ತುವ ನಿರ್ಧಾರಕ್ಕೆ ಬಂದಿರುವುದು ಹೆತ್ತವರಿಗೂ ಸಖತ್ ಖುಷಿ ತಂದಿದೆಯಂತೆ. ಮದುವೆ ಮಾತ್ರ ಮುಂದಿನ ವರ್ಷ. ಕಾಲೇಜು ದಿನಗಳಲ್ಲಿ ಆಗಿದ್ದ ಪರಿಚಯ ನಿಧಾನವಾಗಿ ಪ್ರೇಮಕ್ಕೆ ತಿರುಗಿತ್ತು. ಮರೆಯಲಾಗದ ಪ್ರೇಮ ಎಂಬುದು ಮನದಟ್ಟಾದ ಮೇಲೆ ಮದುವೆಯ ನಿರ್ಧಾರಕ್ಕೆ ಬಂದಿದ್ದೇವೆ ಎನ್ನುತ್ತಿದ್ದಾರೆ ಧ್ಯಾನ್.

ನಾಗತಿಹಳ್ಳಿ ಚಂದ್ರಶೇಖರ ಮಾಸ್ತರರ 'ನನ್ನ ಪ್ರೀತಿಯ ಹುಡುಗಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಹಿಟ್ ಮೂಲಕ ಕಾಲಿಟ್ಟ ಧ್ಯಾನ್, 'ಮೊನಾಲಿಸಾ' ಮತ್ತು 'ಅಮೃತಧಾರೆ'ಗಳಲ್ಲೂ ಮಿಂಚಿದ್ದರು. ಆದರೆ ಈ ನಡುವೆ ಮತ್ತು ನಂತರ ಬಂದ ಜೂಟಾಟ, ಸಜನಿ, ನೀನೇ ನೀನೇ ಹಾಗೂ ಇತ್ತೀಚಿನ ಹುಡುಗ-ಹುಡುಗಿ ಹೇಳ ಹೆಸರಿಲ್ಲದಂತೆ ಕಳೆದು ಹೋಗಿವೆ. 'ಓ ಮನಸೇ' ಎಂಬ ಚಿತ್ರ ಡಬ್ಬದಲ್ಲೇ ಕೊಳೆಯುತ್ತಿದೆ.

ಹಿಂದಿಯಲ್ಲಿ ಎಂಟು ಚಿತ್ರಗಳಲ್ಲಿ ನಟಿಸಿದರೂ ಯಶಸ್ಸು ಮಾತ್ರ ಮಾರು ದೂರ. ತಮಿಳಿನಲ್ಲೂ ಒಂದು ಚಿತ್ರದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು. ಚೆಲುವಾಂತ ಚೆನ್ನಿಗನಾದರೂ ಪ್ರೇಕ್ಷಕರು ಯಾಕೋ ಧ್ಯಾನ್‌ನತ್ತ ಮುಖ ಮಾಡುತ್ತಿಲ್ಲ. ನಟನೆಯೂ ಅಷ್ಟಕಷ್ಟೇ ಎಂದು ಆಗಾಗ ವಿಮರ್ಶಕರು ಟೀಕಿಸುತ್ತಿರುವುದು ಕೂಡ ಅವರಿಗೆ ನುಂಗಲಾರದ ತುತ್ತಾಗುತ್ತಿದೆ.

ಇದೆಲ್ಲ ಏನೇ ಇರಲಿ, ಕನ್ನಡದಲ್ಲಿ ಮೂರು ಸುಂದರ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಧ್ಯಾನ್ ಮದುವೆಯಾಗುತ್ತಿದ್ದಾರೆ ಎಂದರೆ ಹುಡುಗಿಯರಿಗೆ, ಅದರಲ್ಲೂ ಅವರ ಮಹಿಳಾ ಅಭಿಮಾನಿಗಳಿಗೆ ದುಃಖದ ಸುದ್ದಿಯೇ ಸರಿ. ಆ ಬೇಸರದ ನಡುವೆಯೂ ಧ್ಯಾನ್-ಋತಿಕಾ ವೈವಾಹಿಕ ಬದುಕು ಚೆನ್ನಾಗಿರಲಿ ಎಂದು ಹಾರೈಸಲು ಯತ್ನಿಸಿ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಧ್ಯಾನ್, ನನ್ನ ಪ್ರೀತಿಯ ಹುಡುಗಿ, ಋತಿಕಾ, ಹುಡುಗಹುಡುಗಿ, ಋತಿಕಾ ಜೋಲಿ