'ಮೈಲಾರಿ'ಯಾಗಿ ಶಿವಣ್ಣ ಬರ್ತಿದ್ದಾರೆ ನಿಮ್ಮ ಮನೆ ಬಾಗಿಲಿಗೆ!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಲ್‌ರೌಂಡ್ ಪರ್ಫಾರ್ಮೆನ್ಸ್ ತೋರಿಸಲು ನಿಮ್ಮ ಮನೆ ಬಾಗಿಲಿಗೆ 'ಮೈಲಾರಿ'ಯಾಗಿ ಬರುತ್ತಿದ್ದಾರೆ. ಈಗಾಗಲೇ ಮೈಲಾರಿ ಮೇನಿಯಾ ಕರ್ನಾಟಕದಾದ್ಯಂತ ಹಬ್ಬಿರುವುದರಿಂದ ಎಲ್ಲರೂ ರೆಡಿಯಾಗಿರಿ.
ಈ ಮೈಲಾರಿ ಜೈಲಿನಿಂದ ಬಿಡುಗಡೆಯಾದ ಖೈದಿ. ಹಾಗಂತ ಹೆದರಬೇಕಾಗಿಲ್ಲ. ಇದು ಅವನ ಜೀವನದಲ್ಲಿ ಬಂದು ಹೋಗುವ ಘಳಿಗೆಯಷ್ಟೇ. ಎಲ್ಲರಿಗೂ ಪ್ರಿಯವಾಗಲಿರುವ ಆ ಮೈಲಾರಿ ಇನ್ನೇನು ಸ್ಯಾಂಡಲ್‌ವುಡ್ಡಿನಲ್ಲಿ ಕಲರವ ಆರಂಭಿಸಲಿದ್ದಾನೆ.
PR
ಅದೇ ಹೊತ್ತಿಗೆ ಮೈಲಾರಿಗೆ ಭೀತಿಯೂ ಇದೆ. ಜಾಕಿ, ಸೂಪರ್, ಬಿಸಿಲೆ ಮುಂತಾದ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿರುವುದೇ ಈ ಭೀತಿಗೆ ಕಾರಣ. ಈ ಚಿತ್ರಗಳು ಚಿತ್ರಮಂದಿರಗಳನ್ನು ಗಟ್ಟಿಯಾಗಿ ಹಿಡಿದು ಕುಳಿತಿವೆ. ಪ್ರೇಕ್ಷಕರು ಸಹ ಎಂಜಾಯ್ ಮಾಡುತ್ತಿದ್ದಾರೆ. ಇವುಗಳ ಮಧ್ಯೆ 'ಮೈಲಾರಿ' ನುಸುಳಿದರೆ ಚಿತ್ರರಸಿಕನಿಗೆ ಕೊಂಚ ಗೊಂದಲ ಉಂಟು ಮಾಡಬಹುದೆನ್ನುವ ಮಾತು ಸಹ ಇದೆ.
ಏನೇ ಆಗಲಿ, ಇದು ಶಿವಣ್ಣನ 99ನೇ ಚಿತ್ರ. ಅದರಲ್ಲೂ ಶಿವಣ್ಣನ ಜೀವನಕ್ಕೆ ಹತ್ತಿರವಾದ ಕಥಾಹಂದರವನ್ನು ಹೆಣೆದಿದ್ದಾರೆ ನಿರ್ದೇಶಕರು. ಇದರಿಂದ ಜನರಲ್ಲಿ ಕೊಂಚ ಹೆಚ್ಚಿನ ಆಸಕ್ತಿ ಇರುವುದು ಸಹಜ. ಅಭಿಮಾನಿಗಳ ನೆಚ್ಚಿನ ಶಿವಣ್ಣ ಸುಮಾರು ಆರೇಳು ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿದ್ದಾರೆ ಬೇರೆ.
'ತಾಜ್‌ಮಹಲ್' ಚಿತ್ರ ನಿರ್ದೇಶಿಸಿದ ಆರ್. ಚಂದ್ರು ಅವರ ಮಹತ್ವಾಕಾಂಕ್ಷೆಯ ಚಿತ್ರವೂ ಹೌದು. ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಬಂಪರ್ ಗಳಿಸಿದ್ದಲ್ಲದೆ ಅತ್ಯುತ್ತಮ ಸಂಗೀತ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಎಲ್ಲಾ ಭರವಸೆ ಹಾಗೂ ಗುಂಗಿನಲ್ಲಿದ್ದಾರೆ ಚಂದ್ರು.
ಮೈಲಾರಿಯಲ್ಲಿ ವಿನೂತನವಾಗಿ ಹೊಸಬರು ನಾಚಿಸುವಂತೆ ವಿಶಿಷ್ಟ ವೇಶದಲ್ಲಿ ಶಿವಣ್ಣ ಕುಣಿದಿರುವುದು ಹಾಗೂ ಇದರ ಹಾಡುಗಳು ಈಗಾಗಲೇ ಜನಮನ ಸೂರೆಗೊಂಡಿರುವುದು ನಿರ್ಮಾಣ ಸಂಸ್ಥೆಗೆ ಸಂತಸ ತಂದಿದೆ. ಕುಟುಂಬ ಸಮೇತರಾಗಿ ಕುಳಿತು ನೋಡುವಂತ ಚಿತ್ರ ಎನ್ನುತ್ತಾರೆ ಚಂದ್ರು.
ಇಲ್ಲಿ ಅಪ್ಪ-ಮಗನ ಸೆಂಟಿಮೆಂಟ್ ಇದೆ, ಪ್ರೇಮವಿದೆ, ಮಚ್ಚು ಲಾಂಗುಗಳ ಅಬ್ಬರವಿದೆ. ಚುರುಕು ಸಂಭಾಷಣೆ ಇದೆ. ಇಷ್ಟೆಲ್ಲ ಇದ್ದ ಮೇಲೆ ಯಾರಿಗೆ ಇಷ್ಟವಾಗುವುದಿಲ್ಲ ಎಂಬ ಮಾತು ಗಾಂಧಿನಗರದ ಮಂದಿಯಲ್ಲಿ ಸುಳಿದಾಡುತ್ತಿದೆ.
ಮೈಲಾರಿ ಕೇವಲ ಕಾಲ್ಪನಿಕವಲ್ಲ. ಯಾವುದೇ ಒಂದು ವರ್ಗಕ್ಕೆ ಸೀಮಿತವೂ ಅಲ್ಲ. ಎಲ್ಲರೂ ನೋಡುವಂತ ಚಿತ್ರ. ಇದೊಂದು ಬಿಗ್ ಬಜೆಟ್ ಚಿತ್ರ. ಈ ಚಿತ್ರ ಹಾಡುಗಳನ್ನು ಮಿಕ್ಸಿಂಗಾಗಿರುವುದು ಲಂಡನ್ನಿನಲ್ಲಿ. ಸಂಪೂರ್ಣ ಡಿಜಿಟಲ್ ಎಫೆಕ್ಟ್ ಇದೆಯಂತೆ.
ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಬಯಕೆಯಿದೆ ಎಂದಿದ್ದಾರೆ ನಿರ್ಮಾಪಕರಾದ ಆರ್.ಎಸ್. ಕಂಬೈನ್ಸ್‌ನ ಕೆ.ಪಿ. ಶ್ರೀಕಾಂತ್ ಹಾಗೂ ಕನಕಪುರ ಶ್ರೀನಿವಾಸ್.