ಸದಾ ಗೆಳೆಯರ ಬಗ್ಗೆ ಚಿಂತಿಸುವ ನಟ-ನಿರ್ದೇಶಕ ಸುದೀಪ್ ಈಗ ಆತ್ಮೀಯ ಗೆಳೆಯ ಯತಿರಾಜ್ ಬರೆದಿರುವ ಕಥೆಯನ್ನು ಕೇಳಿ ಥ್ರಿಲ್ ಆಗಿದ್ದಾರೆ. ಸೌಭಾಗ್ಯಲಕ್ಷ್ಮೀ ಬ್ಯಾನರಿನಡಿ 'ದೀಪು' ದ ಹೀರೋ ಎಂದು ನಾಮಕರಣ ಮಾಡಿದ್ದಾರೆ. ದೀಪು ಎನ್ನುವುದು ಸುದೀಪ್ ಅವರನ್ನು ಸಂಬಂಧಿಕರು ಕರೆಯುವ ಹೆಸರು. ಅದನ್ನೇ ಚಿತ್ರಕ್ಕೆ ಇಟ್ಟಿರುವುದು ವಿಶೇಷ.
ಚಿತ್ರದ ಕಥೆ ಕೇಳಿದ ಸುದೀಪ್ ಬಹಳ ಖುಷಿಯಾಗಿದ್ದಾರಂತೆ. ತನ್ನ ಇದುವರೆಗಿನ ಚಿತ್ರಗಳಲ್ಲಿ ಸ್ನೇಹಿತರಿಗಾಗಿ ಒಂದಿಲ್ಲೊಂದು ಪಾತ್ರ ಸೃಷ್ಟಿ ಮಾಡುತ್ತಲೇ ಬಂದಿದ್ದಾರೆ ಸುದೀಪ್. ಅಂತಹವರ ಗುಂಪಿನಲ್ಲಿ ಯತಿರಾಜ್ ಕೂಡ ಒಬ್ಬರು. ಮೈ ಆಟೋಗ್ರಾಫ್, ಮುಸ್ಸಂಜೆ ಮಾತು, ತಿರುಪತಿ, ಗೂಳಿ, ಜಸ್ಟ್ ಮಾತ್ ಮಾತಲ್ಲಿ... ಹೀಗೆ ಹಲವು ಚಿತ್ರಗಳಲ್ಲಿ ಈ ಯತಿರಾಜ್ ಗೆಳೆಯನಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಗೆಳೆಯ ಯತಿ ಸೃಷ್ಟಿಸಿದ ಕಥೆಯೆಂದ ಮೇಲೆ ಮತ್ತಷ್ಟು ಥ್ರಿಲ್ ಆಗಿದ್ದಾರೆ ಸುದೀಪ್. ಚಿತ್ರಕಥೆಯನ್ನು ಕೇಳಿ ತಕ್ಷಣ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಗ್ರೀನ್ ಸಿಗ್ನಲ್ ಸಿಕ್ಕಮೇಲೆ ನಿರ್ಮಾಪಕರ ಹುಡುಕಾಟದಲ್ಲಿ ತೊಡಗಿದ್ದಾರೆ ಯತಿರಾಜ್.
'ದೀಪು'ವಿನೊಂದಿಗೆ ಯತಿರಾಜ್ ನಿರ್ದೇಶಕರಾಗಿಯೂ ಸತ್ವ ಪರೀಕ್ಷೆ ಮಾಡಲಿದ್ದಾರೆ. ಈಗಾಗಲೇ ಇಬ್ಬರು ನಿರ್ಮಾಪಕರ ಜೊತೆ ಮೊದಲ ಹಂತದ ಮಾತುಕತೆ ಮುಗಿಸಿರುವ ಯತಿ, ಕಲಾವಿದರ ಪಾತ್ರವರ್ಗದ ಕುರಿತು ಗೆಳೆಯ ಸುದೀಪ್ ಜತೆ ಕುಳಿತು ಚರ್ಚಿಸಲಿದ್ದಾರೆ.
ಸದ್ಯದಲ್ಲಿ ಸುದೀಪ್ 'ಸೆಲಬ್ರಿಟಿ ಕ್ರಿಕೆಟ್'ನಲ್ಲಿ ತುಂಬಾ ಬ್ಯುಸಿಯಾಗಿರುವುದರಿಂದ ಈ ಪ್ರಾಜೆಕ್ಟ್ ಬಹುಶಃ ಫೆಬ್ರವರಿ ಎರಡನೇ ವಾರದಲ್ಲಿ ಜಾರಿಗೆ ಬರಬಹುದು.