ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಿಗೆ ಯಾವುದೋ ಊರಿನ ಹೆಸರನ್ನು ಸಿನಿಮಾಗಳಿಗೆ ಇಡುವುದೆಂದರೆ ಎಲ್ಲಿಲ್ಲದ ಖುಷಿ ಇರಬೇಕು. 'ಹುಬ್ಬಳ್ಳಿ'ಯನ್ನು ಜನರಿಗೆ ತೋರಿಸಿದ ಬೆನ್ನಿಗೆ ಅವರು ಕೈ ಹಾಕಿರುವ 'ಬೆಳಗಾಂ' ಚಿತ್ರವೇ ಇದಕ್ಕೆ ಸಾಕ್ಷಿ.
ಬೆಳಗಾಂ ಅವರ ಹೊಸ ಚಿತ್ರದ ಹೆಸರು. 'ಬಾರ್ಡರ್- ದೆರ್ ಇಸ್ ಓನ್ಲಿ ಆರ್ಡರ್' ಎಂಬ ಪಂಚ್ ಲೈನ್ ಕೂಡ ಇದಕ್ಕಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಉತ್ತರ ಕರ್ನಾಟಕದ ಸೊಗಡಿನ ಕಥೆಯುಳ್ಳ ಚಿತ್ರ. ಇತ್ತೀಚೆಗಷ್ಟೇ 'ಹುಲಿ' ಚಿತ್ರಕ್ಕೆ ಕಿಶೋರ್‌ರನ್ನು ನಾಯಕನನ್ನಾಗಿ ಮಾಡಿದ್ದ ಓಂ, ಈಗ ಬೆಳಗಾಂ ಚಿತ್ರಕ್ಕೂ ಕಿಶೋರ್ ಅವರನ್ನೇ ಆರಿಸಿದ್ದಾರೆ.
ಡೇನಿಸಾ ಫಿಲಂಸ್ ಬ್ಯಾನರಿನಡಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಹೇಳಿದ್ದಾರೆ. ಡೇನಿಸಾ ಓಂ ಪ್ರಕಾಶ್ ಅವರ ಪತ್ನಿಯ ಹೆಸರು.
ಬೆಳಗಾಂನಲ್ಲಿ ವರ್ಷಕ್ಕೊಮ್ಮೆ ನಡೆಯುವ ಖಾರಹಬ್ಬ ಚಿತ್ರದ ಕಥಾವಸ್ತು. ಆ ಊರಿನವರು ಎಲ್ಲೇ ಇದ್ದರೂ, ಆ ಹಬ್ಬದಲ್ಲಿ ಅವರ ತಾಯಿ ಕೈತುತ್ತು ತಿನ್ನಲೇಬೇಕು ಅಂತಲೇ ಊರಿಗೆ ಬರುತ್ತಾರೆ. ಇದೇ ವಿಷಯವನ್ನು ಆಧರಿಸಿ ಓಂ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಪಕ್ಕಾ ಸೆಂಟಿಮೆಂಟಲ್-ಕಮರ್ಷಿಯಲ್ ಚಿತ್ರವಂತೆ. ಓಂ ಪ್ರಕಾಶ್ ಇದ್ದಲ್ಲಿ ಹಾಸ್ಯ ಇದ್ದೇ ಇರುತ್ತದೆ. ಆಕ್ಷನ್ ಅಂತೂ ಕಡ್ಡಾಯ.
ಬೆಳಗಾಂ, ಗೋಕಾಕ್, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುತ್ತೇನೆ ಎಂದಿದ್ದಾರೆ ಓಂ.