ಇದು ಮಂಜ ಆಲಿಯಾಸ್ ಮಂಜುನಾಥನ ಸಿಂಪಲ್ ಇತಿಹಾಸ. ಆದರೆ ತನ್ನ ಮುಂದಿನ ದಿನಗಳು ಹಾಗಿರುವುದಿಲ್ಲ, ಖಂಡಿತಾ ಕಳ್ಳತನ-ದರೋಡೆ ಮಾಡುವುದಿಲ್ಲ. ಸಭ್ಯ ನಾಗರಿಕನಾಗಿ ಬದುಕುತ್ತೇನೆ ಎಂದು ಭರವಸೆ ನೀಡಿದ್ದಾನೆ. ಇದಕ್ಕೆ ಕಾರಣರಾಗಿರುವುದು ಮಳೆ ಹುಡುಗಿ ಪೂಜಾ ಗಾಂಧಿ!
ಹೌದು, ಸಾಕಷ್ಟು ಅಪರಾಧಗಳನ್ನು ಮಾಡಿ ಜೈಲು ಸೇರಿರುವ ಮಂಜನನ್ನು, ಆತನ ನೆಚ್ಚಿನ ನಟಿ ಪೂಜಾ ಗಾಂಧಿ ಇತ್ತೀಚೆಗಷ್ಟೇ ಜೈಲಿನಲ್ಲಿ ಭೇಟಿಯಾಗಿದ್ದರು. ಸಾಕಷ್ಟು ಬುದ್ಧಿ ಹೇಳಿದ್ದರು. ತನ್ನ ತಪ್ಪುಗಳನ್ನು ಒಪ್ಪಿಕೊಂಡ ಮಂಜ, ಮುಂದೆಂದೂ ಹಾಗೆ ಮಾಡೋದಿಲ್ಲ ಎಂದು ಮಾತು ಕೊಟ್ಟಿದ್ದಾನೆ. ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂದು ಗೋಳೋ ಎಂದು ಅತ್ತಿದ್ದಾನೆ.
WD
ಈ ಮಂಜ ಸಾಮಾನ್ಯ ಕಳ್ಳನಲ್ಲ. ಬೈಕುಗಳನ್ನು ಎತ್ತಾಕಿಕೊಂಡು ಹೋಗೋದು, ಮೊಬೈಲ್ ಫೋನುಗಳನ್ನು ಕದಿಯುವುದು, ಮಹಿಳೆಯರ ಕತ್ತಿನಿಂದ ಚಿನ್ನದ ಸರಗಳನ್ನು ಎಗರಿಸುವುದು ಸೇರಿದಂತೆ ಹತ್ತಾರು ಆರೋಪಗಳನ್ನು ಹೊತ್ತಿರುವವನು. ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರ ಪ್ರಕಾರ ಕನಿಷ್ಠ ನಾಲ್ಕು ಪ್ರಕರಣಗಳಲ್ಲಿ ಖಾಕಿಗಳಿಗೆ ಬೇಕಾದವನು.
ಇಷ್ಟು ಚಿಕ್ಕ ವಯಸ್ಸಿನಲ್ಲೇ ಕಳ್ಳತನವನ್ನು ರೂಢಿ ಮಾಡಿಕೊಂಡು ಬೆಂಗಳೂರು-ಮೈಸೂರು ನಡುವೆ ಓಡಾಡಿಕೊಂಡಿದ್ದ ಹುಡುಗನನ್ನು ಪೂಜಾ ಗಾಂಧಿ ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಆತನಿಗೆ ಹೊಸ ಜೀವನವನ್ನು ದಯ ಪಾಲಿಸಿದ್ದಾರೆ. ಇದೇ ನಿಟ್ಟಿನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ಭರವಸೆ ಮಂಜನ ಕಣ್ಣಂಚಿನಲ್ಲಿ ಜಿನುಗುತ್ತಿದೆ.
ನಾನು ಪೂಜಾ ಗಾಂದಿಯವರ ಎಲ್ಲಾ ಸಿನಿಮಾಗಳನ್ನೂ ನೋಡಿದ್ದೇನೆ. ಆದರೆ ಅದರಲ್ಲಿ ಮುಂಗಾರು ಮಳೆ ಟಾಪ್. ಅವರನ್ನು ಎಂದಾದರೂ ಭೇಟಿ ಮಾಡುತ್ತೇನೆ, ಮಾತನಾಡುತ್ತೇನೆ ಎಂದು ಕನಸಲ್ಲೂ ಎಣಿಸಿರಲಿಲ್ಲ. ಆದರೆ ಅದು ಸಾಧ್ಯವಾಗಿದೆ ಎಂದು ಮಂಜ ಸಂತಸದಿಂದಲೇ ಹೇಳಿಕೊಂಡಿದ್ದಾನೆ.
ಡಿಸೆಂಬರ್ ತಿಂಗಳನ್ನು ಅಪರಾಧ ತಡೆ ಮಾಸ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸರ ಆಹ್ವಾನದ ಮೇರೆಗೆ ಪೂಜಾ ಗಾಂಧಿ ಬಂದಿದ್ದರು. ಅಪರಾಧಿಗಳಲ್ಲಿ, ಜನರಲ್ಲಿ ಜಾಗೃತಿ ಮೂಡಿಸಲು ಪಣ ತೊಟ್ಟಿರುವ ಪೊಲೀಸರು ಈ ಸಂಬಂಧ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಮಾನಸಿಕ ಬದಲಾವಣೆ ತರಲು ಯತ್ನಿಸುತ್ತಾರೆ.
ಮಂಜ ಸೆಲ್‌ನಲ್ಲಿದ್ದಾನೆ, ಜಾಗೃತೆಯಿಂದ ಹೋಗಿ ಎಂಬ ಎಚ್ಚರಿಕೆ ಪೂಜಾ ಗಾಂಧಿಗೆ ನೀಡಲಾಗಿತ್ತು. ಅದರಂತೆ ಸೀದಾ ಆತನಿದ್ದ ಕೊಠಡಿಗೆ ತೆರಳಿದ ಪೂಜಾ, ಆತ್ಮೀಯತೆಯಿಂದ ಮಾತನಾಡಲಾರಂಭಿಸಿದರು. ಇವರನ್ನು ನೋಡುತ್ತಿದ್ದಂತೆ ಕ್ಲೀನ್ ಬೌಲ್ಡ್ ಆದ ಮಂಜ, ತಾನು ಮಾಡಿದ್ದನ್ನೆಲ್ಲ ಒಪ್ಪಿಕೊಂಡ.
ಕ್ರಿಮಿನಲ್ ಕೃತ್ಯಗಳಲ್ಲಿ ಇನ್ನು ನೀನು ತೊಡಗಿಸಿಕೊಳ್ಳಬಾರದು. ಜನಸಾಮಾನ್ಯರಂತೆ ಕಷ್ಟಪಟ್ಟು ದುಡಿದು ಸಂಪಾದಿಸು. ಅಡ್ಡದಾರಿಯ ವೃತ್ತಿ ನಿನಗೆ ಬೇಡ. ಸಮಾಜಕ್ಕೆ ಮಾದರಿಯಾಗು. ದಿನ ಸಂಬಳಕ್ಕೆ ದುಡಿಯುವ ಕಾರ್ಮಿಕನಾದರೂ ಪರವಾಗಿಲ್ಲ, ಆದರೆ ಕಳ್ಳತನ ಬೇಡ ಎಂಬ ಪೂಜಾ ಸಲಹೆಯನ್ನು ಕಿವಿ ತುಂಬಿಸಿಕೊಂಡ ಮಂಜ, ಅತ್ತೇ ಬಿಟ್ಟ. ಇನ್ನೆಂದೂ ಕೆಟ್ಟ ಕೆಲಸ ಮಾಡೋದಿಲ್ಲ ಅಂತ ಭರವಸೆ ನೀಡಿದ.
ತನ್ನ ಒಂದು ಯಕಃಶ್ಚಿತ್ ಭೇಟಿಯಿಂದ ಕಳ್ಳನೊಬ್ಬನಲ್ಲಿ ಇಷ್ಟೊಂದು ಬದಲಾವಣೆ ತರಲು ಸಾಧ್ಯವಾಗಿರುವುದು ಸಹಜವಾಗಿಯೇ ಪೂಜಾ ಗಾಂಧಿಯಲ್ಲಿ ಸಂಚಲನ ಸೃಷ್ಟಿಸಿದೆ. ರೋಮಾಂಚನ ತಂದಿದೆ.
ಆದರೆ ಮಂಜ ಮತ್ತೆ ಬೇಸರದಲ್ಲಿದ್ದಾನೆ. ಅದಕ್ಕೆ ಕಾರಣ ತನ್ನ ಆರಾಧ್ಯ ದೇವತೆಯನ್ನು ಜೈಲಿನಲ್ಲಿ ಭೇಟಿ ಮಾಡಿರುವುದು. ತಾನು ಕನಸೂ ಕಾಣದಿದ್ದ ಇಂತಹ ಕ್ಷಣವೊಂದು ಕಂಬಿಗಳ ಹಿಂದೆ ನಡೆದಿರುವುದು ಆತನಿಗೆ ದುಃಖ ತಂದಿದೆ. ನಾನೊಬ್ಬ ಮಾದರಿ ವ್ಯಕ್ತಿಯಾಗುತ್ತೇನೆ ಎಂದು ನೀಡಿರುವ ಭರವಸೆಯನ್ನು ಖಂಡಿತಾ ಈಡೇರಿಸುತ್ತೇನೆ ಎನ್ನುತ್ತಾನೆ ಆತ.
ಮಂಜ ನಿಜಕ್ಕೂ ಬದಲಾದನೆಂದರೆ ಪೂಜಾ ಗಾಂಧಿ ಮತ್ತು ಈ ಸಮಾಜಕ್ಕೆ ಇದಕ್ಕಿಂತ ಸಂತಸದ ವಿಚಾರ ಬೇರೇನಿದೆ, ಅಲ್ವೇ?