ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ, ಬಹುಭಾಷಾ ನಟ, ಸ್ಟೈಲ್ ಕಿಂಗ್ ಎಂಬ ಬಿರುದಾಂಕಿತ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಭಾನುವಾರ 61ನೇ ವಸಂತಕ್ಕೆ ಕಾಲಿಟ್ಟಿದ್ದು, ಆ ನಿಟ್ಟಿನಲ್ಲಿ ತಮಿಳುನಾಡಿನಾದ್ಯಂತ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಬರ್ತ್‌ಡೇ ಆಚರಿಸಿದರು.
1950ರಲ್ಲಿ ಕರ್ನಾಟದಲ್ಲಿ ಜನಿಸಿ, ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಶಿವಾಜಿ ರಾವ್ ಗಾಯಕ್ವಾಡ್ ಅಲಿಯಾಸ್ ರಜನಿಕಾಂತ್ ನಂತರ ಕಾಲಿಟ್ಟದ್ದು ತಮಿಳುನಾಡಿನ ಚಿತ್ರರಂಗಕ್ಕೆ. 1975ರಲ್ಲಿ ಅಪೂರ್ವ ರಾಗಂಗಗಳ್ (ಕೆ.ಬಾಲಚಂದರ್ ನಿರ್ದೇಶನದ) ಚಿತ್ರದ ಮೂಲಕ ಬಣ್ಣದ ಬದುಕನ್ನು ಆರಂಭಿಸಿದ್ದರು.
ಸಿನಿಮಾ ರಂಗದಲ್ಲಿ ತನ್ನದೇ ಸ್ಟೈಲ್, ಗೆಟಪ್, ಪಂಚಿಂಗ್ ಡೈಲಾಗ್, ಮಿಂಚಿಂಗ್ ಫೈಟಿಂಗ್ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಎವರ್ ಗ್ರೀನ್ ಹೀರೋ ಎಂಬ ಶ್ಲಾಘನೆಗೆ ಒಳಗಾಗಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಬಹುಕೋಟಿ ವೆಚ್ಚದ ಎಂಧಿರನ್ (ರೋಬೋಟ್) ಸಿನಿಮಾ ಜಗತ್ತಿನ ಸಿನಿಮಾ ರಂಗದ ಹುಬ್ಬೇರಿಸುವಂತೆ ಮಾಡಿದ ಕೀರ್ತಿ ರಜನಿಕಾಂತ್ ಅವರದ್ದಾಗಿದೆ. ಈಗಾಗಲೇ ಸುಮಾರು 150 ಚಿತ್ರಗಳಲ್ಲಿ ನಟಿಸಿರುವ ರಜನಿ ತಮ್ಮ ಮೂರು ದಶಕಗಳ ಬಣ್ಣದ ಲೋಕದ ಬದುಕಿನಲ್ಲಿ ಅಪಾರ ಜನಮನ್ನಣೆ ಗಳಿಸಿದ್ದಾರೆ.
ಇಂದು ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬದ ಪ್ರಯುಕ್ತ ತಮಿಳುನಾಡಿನಾದ್ಯಂತ ಅಭಿಮಾನಿಗಳು ಪೋಸ್ಟರ್ ಹಚ್ಚಿ, ಸಿಹಿ ತಿಂಡಿ ವಿತರಿಸಿ, ವಿವಿಧ ದೇವಾಲಯಗಳಲ್ಲಿ ಪೂಜೆ-ಪುನಸ್ಕಾರ ನೆರವೇರಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.