ಭಟ್ರು, ಸೂರಿ, ಪ್ರೇಮ್ ನನ್ನ ಹತ್ತಿರ ಬಂದಿಲ್ಲ: ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಕನ್ನಡದ ಅಗ್ರ ನಿರ್ದೇಶಕರ ಚಿತ್ರಗಳಲ್ಲಿ ಯಾಕೆ ನಡೆಸುತ್ತಿಲ್ಲ? ಹೌದಲ್ಲ, ಹಿಂದಿ-ತೆಲುಗುಗಳಲ್ಲಿ ಅತಿರಥ ಮಹಾರಥ ನಿರ್ದೇಶಕರಿಗೆ ಇಷ್ಟವಾಗುವ ಸುದೀಪ್ ಕನ್ನಡದವರಿಗೆ ಯಾಕೆ ಇಷ್ಟವಾಗುತ್ತಿಲ್ಲ? ಇದೇ ಪ್ರಶ್ನೆಯನ್ನು ಸುದೀಪ್‌ಗೆ ಅಭಿಮಾನಿಗಳು ಕೇಳಿದ್ದಾರೆ.
ಜನಪ್ರಿಯ ನಿರ್ದೇಶಕರು ನನ್ನತ್ತ ಸುಳಿದಿಲ್ಲ. ಯಾವತ್ತೂ ನನ್ನ ಚಿತ್ರವನ್ನು ನಿರ್ದೇಶಿಸುತ್ತೇವೆ ಎಂದು ಮುಂದೆ ಬಂದಿಲ್ಲ. ಹಾಗಾಗಿ ನಾನೇನು ಮಾಡುವಂತಿಲ್ಲ ಎಂದು ಕಿಚ್ಚ ಉತ್ತರಿಸಿದ್ದಾರೆ.
MOKSHA
ಯೋಗರಾಜ್ ಭಟ್, ದುನಿಯಾ ಸೂರಿ ಮತ್ತು ಪ್ರೇಮ್ ಮುಂತಾದವರ ಹೆಸರನ್ನು ಉಲ್ಲೇಖಿಸಿಯೇ ಸುದೀಪ್ ಹೀಗೆ ಹೇಳಿದ್ದಾರೆ.
ಹಾಗೆ ನೋಡಿದರೆ ಯೋಗರಾಜ್ ಭಟ್ ಎರಡನೇ ಚಿತ್ರ ಸುದೀಪ್‌ರದ್ದೇ ಆಗಿತ್ತು. ರಮ್ಯಾ ನಾಯಕಿಯಾಗಿದ್ದ 'ರಂಗ ಎಸ್ಎಸ್ಎಲ್‌ಸಿ'ಯಲ್ಲಿ ಭಟ್ರು ಸುದೀಪ್‌ರನ್ನು ನಿರ್ದೇಶಿಸಿದ್ದರು. ಆದರೆ ಚಿತ್ರ ಮಾತ್ರ ಫ್ಲಾಪ್ ಆಗಿತ್ತು.
ಆ ಬಳಿಕ ಸುದೀಪ್ ಸನಿಹಕ್ಕೆ ಭಟ್ರು ಸುಳಿದಿಲ್ಲ. ಮೊದಲ ಚಿತ್ರ ಮಣಿಯಲ್ಲಿ ಮಯೂರ್ ಪಟೇಲ್, ಮುಂಗಾರು ಮಳೆಯಲ್ಲಿ ಗಣೇಶ್, ಬಹುತಾರಾಗಣದ ಗಾಳಿಪಟದಲ್ಲಿ ಮತ್ತೆ ಗಣೇಶ್, ಮನಸಾರೆ-ಪಂಚರಂಗಿಯಲ್ಲಿ ದಿಗಂತ್‌ರನ್ನು ನಿರ್ದೇಶಿಸಿದ್ದರು. ಅವರ ನಿರ್ದೇಶನದಲ್ಲಿ ಅತಿ ಹೆಚ್ಚು ಅವಕಾಶ ಪಡೆದುಕೊಂಡಿರುವುದು ದಿಗಂತ್. ನಂತರದ ಸ್ಥಾನ ಗೋಲ್ಡನ್ ಸ್ಟಾರ್ ಗಣೇಶ್‌ರದ್ದು.
'ಕನ್ನಡದ ಜನಪ್ರಿಯ ನಿರ್ದೇಶಕರಿಗಿಂತ ಇತರ ಭಾಷೆಗಳ ಪ್ರಸಿದ್ಧರು ನನ್ನ ಜತೆ ಕೆಲಸ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಇಲ್ಲಿನ ಕೆಲವರು ನನ್ನ ಚಿತ್ರಗಳನ್ನು ಯಾಕೆ ನಿರ್ದೇಶಿಸುತ್ತಿಲ್ಲ ಎಂಬ ಪ್ರಶ್ನೆಯನ್ನು ದಯವಿಟ್ಟು ಕೇಳಬೇಡಿ' ಎಂದು ಅಭಿಮಾನಿಗಳಲ್ಲಿ ಸುದೀಪ್ ಮನವಿ ಮಾಡಿಕೊಂಡಿದ್ದಾರೆ.
ಅವರು ನನ್ನ ಬಳಿ ಬಂದು, ನನ್ನ ನಿರ್ದೇಶನದ ಚಿತ್ರಕ್ಕೆ ನೀವು ನಾಯಕರಾಗಬೇಕು ಎಂದರೆ ನಾನು ಬೇಡ ಎನ್ನುವೆನೇ ಎಂದೂ ಸಾಮಾಜಿಕ ಸಂಪರ್ಕತಾಣದಲ್ಲಿ ಪ್ರಶ್ನಿಸಿರುವ ಅಭಿಮಾನಿಯೊಬ್ಬನಿಗೆ ಕಿಚ್ಚ ಉತ್ತರಿಸಿದ್ದಾರೆ.
ಸುನಿಲ್ ಕುಮಾರ್ ದೇಸಾಯಿಯವರಂತಹ ಅದ್ಭುತ ನಿರ್ದೇಶಕರ ಚಿತ್ರದಲ್ಲೇ ಸುದೀಪ್ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡದ್ದು. 'ಸ್ಪರ್ಶ' ಚಿತ್ರದಲ್ಲಿ ಮಿಂಚಿದ್ದ ಸುದೀಪ್ ನಂತರ ಹಲವು ನಿರ್ದೇಶಕರಿಗೆ ಹಾಲು ಕೊಡುವ ಹಸುವಾಗಿದ್ದರು.
ಕರಿಯದಲ್ಲಿ ದರ್ಶನ್, ಎಕ್ಸ್‌ಕ್ಯೂಸ್ ಮೀಯಲ್ಲಿ ಸುನಿಲ್ ರಾವ್-ಅಜಯ್ ರಾವ್, ಜೋಗಿ-ಜೋಗಯ್ಯದಲ್ಲಿ ಶಿವರಾಜ್ ಕುಮಾರ್, ರಾಜ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನಿರ್ದೇಶಿಸಿರುವ ಪ್ರೇಮ್, ದುನಿಯಾ-ಜಂಗ್ಲಿಯಲ್ಲಿ ವಿಜಯ್, ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಜಾಕಿಯಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನಿರ್ದೇಶಿಸಿದ್ದ ಸೂರಿ ಇದುವರೆಗೂ ಸುದೀಪ್ ಚಿತ್ರ ನಿರ್ದೇಶಿಸಿಲ್ಲ.
ಮುಂದಾದರೂ ಸುದೀಪ್ ಸನಿಹಕ್ಕೆ ಸುಳಿಯುವರೇ ಎಂಬುದನ್ನು ಕಾದು ನೋಡಬೇಕಾಗಿದೆ.