ನಾಗತಿಹಳ್ಳಿ ಚಂದ್ರಶೇಖರ್ ಅವರೇ ಬರೆದಿರುವ ಸಣ್ಣ ಕಥೆಯಾಧಾರಿತ 'ಪುಟ್ಟಕ್ಕನ ಹೈವೇ' ಬಹಳ ದಿನಗಳಿಂದ ಕನ್ನಡ ಚಿತ್ರರಂಗದಿಂದ ದೂರಾಗಿದ್ದ ಶ್ರುತಿಗೆ ಮತ್ತೆ ಬ್ರೇಕ್ ಸಿಗಬಹುದೆ ಎನ್ನುವ ನಿರೀಕ್ಷೆ ಹುಟ್ಟು ಹಾಕಿದೆ.
ಶ್ರುತಿ ಮದುವೆಯಾದ ನಂತರ ಸಿನಿಮಾರಂಗದಿಂದ ಕೊಂಚ ಮಟ್ಟಿಗೆ ದೂರಾವಾದರೂ, ಸಂಪೂರ್ಣವಾಗಿ ಬಿಟ್ಟಿರಲಿಲ್ಲ. ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆಯುತ್ತಾ ಬಂದವರು. ಈ ನಡುವೆ ಅವರ ಜೀವನದ ಗತಿಯೂ ಹಲವು ತಿರುವುಗಳನ್ನು ಪಡೆಯಿತು. ರಾಜಕೀಯ ರಂಗದಲ್ಲೂ ಅದೃಷ್ಟ ಪರೀಕ್ಷೆ ನಡೆಸಿದರು.
ಆದರೆ ಈಗ ಅವೆಲ್ಲದರಿಂದ ದೂರವಾಗಿ 'ಹಳೆ ಗಂಡನ ಪಾದವೇ ಗತಿ' ಎನ್ನುವಂತೆ ಸಾಕುಮನೆ ಚಿತ್ರರಂಗದತ್ತ ಸಂಪೂರ್ಣವಾಗಿ ಮುಖ ಮಾಡಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ 'ಪುಟ್ಟಕ್ಕನ ಹೈವೇ'.
ಚಿತ್ರದ ಕಥೆಯಲ್ಲಿ ಕೊಂಚ ಸೂಕ್ಷ್ಮತೆ ಇದೆ, ಪ್ರಸ್ತುತ ಸಂದರ್ಭದಲ್ಲಿ ಅಭಿವೃದ್ದಿ ಎಂಬುದು ಪಡೆದಿಕೊಂಡಿರುವ ಅರ್ಥಗಳೇ ಬೇರೆ. ಈ ಅಭಿವೃದ್ದಿಯಲ್ಲಿ ಲಾಭ ಪಡೆದುಕೊಂಡವರಿಗೂ ಎಲ್ಲಾ ಕಳೆದುಕೊಂಡವರಿಗೂ ಇರುವ ಅಂತರ ಮಾತ್ರ ದೊಡ್ಡದು. ಈ ಹಿನ್ನೆಲೆಯಲ್ಲಿ ನಿರ್ದೇಶಕ, ಕಥೆಗಾರ ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರ ನಿರ್ಮಿಸುತ್ತಿದ್ದಾರೆ.
ಪುಟ್ಟಕ್ಕನಾಗಿ ಶ್ರುತಿ, ಪ್ರಕಾಶ್ ರೈ, ಸಿಹಿಕಹಿ ಚಂದು, ಮಂಡ್ಯ ರಮೇಶ್, ಶೈಲಜಾ ನಾಗ್, ಅಚ್ಯುತಕುಮಾರ್, ವೀಣಾ ಸುಂದರ್ ಇತರರು ಇದ್ದಾರೆ. ಹಂಸಲೇಖ ಅವರು ಸಂಗೀತ, ಎಚ್.ಎಂ. ರಾಮಚಂದ್ರ ಛಾಯಾಗ್ರಹಣ ಈ ಚಿತ್ರಕ್ಕಿದೆ.