ನಿನ್ನೆಯಷ್ಟೇ 'ಸೂಪರ್' ನೋಡಿದ್ದೇನೆ. ನಿಜಕ್ಕೂ ಸೂಪರ್ ಆಗಿದೆ. ಉಪ್ಪಿ ಸಾರ್ ರಾಜಕೀಯಕ್ಕೆ ಬರಲೇಬೇಕು. ಹಾಗಾದಲ್ಲಿ ನಮ್ಮ ಕನಸಾಗಿರುವ 2030ರ ಭಾರತ ನನಸಾಗಬಹುದು -- ಹೀಗೆಂದು ನಾನು ಹೇಳಿಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಸಂಪರ್ಕ ತಾಣ ಟ್ವಿಟ್ಟರಿನಲ್ಲಿ ಪುನೀತ್ ರಾಜ್‌ಕುಮಾರ್ (PuneethRajkumar) ಹೆಸರಿನಲ್ಲಿ ಇಂತಹ ಹೇಳಿಕೆಯೊಂದು ಡಿಸೆಂಬರ್ 9ರಂದು ಪ್ರಕಟವಾಗಿತ್ತು. ಆದರೆ ಅದು ನಾನಲ್ಲ, ನನ್ನ ಹೆಸರಿನಲ್ಲಿ ಯಾರೋ ಬೇರೆ ನಕಲಿ ಖಾತೆಯನ್ನು ತೆರೆದು ಅಭಿಮಾನಿಗಳನ್ನು ಮೋಸ ಮಾಡುತ್ತಿದ್ದಾರೆ ಎಂದು ಪುನೀತ್ ಹೇಳಿದ್ದಾರೆ.
MOKSHA
ಸೂಪರ್ ಚಿತ್ರ ನಿಜಕ್ಕೂ ಸೂಪರ್ ಆಗಿದೆ. 2030ರ ಬೆಂಗಳೂರು ಕಲ್ಪನೆಯೂ ಸೂಪರ್. ಈ ಬಗ್ಗೆ ಎರಡನೇ ಮಾತಿಲ್ಲ. ಆದರೆ ಟ್ವಿಟ್ಟರಿನಲ್ಲಿ ನನ್ನ ಹೆಸರಿನಲ್ಲಿರುವ ಖಾತೆ ನನ್ನದಲ್ಲ ಎಂದು ಪವರ್ ಸ್ಟಾರ್ ತಿಳಿಸಿದ್ದಾರೆ.
ಪುನೀತ್ ಹೆಸರಿನಲ್ಲಿರುವ ಈ ನಕಲಿ ಖಾತೆಯನ್ನು 450ಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಸ್ವತಃ ಪುನೀತ್ ತಮಗೆ ಟ್ವೀಟ್ ಮಾಡುತ್ತಿದ್ದಾರೆ ಎಂದು ಅವರು ಮೋಸ ಹೋಗುತ್ತಿದ್ದಾರೆ. ಹಲವರೊಂದಿಗೆ ಚಾಟ್ ಕೂಡ ನಡೆಸಿರುವುದು ಟ್ವಿಟ್ಟರ್ ಪುಟವನ್ನು ತಿರುವಿದಾಗ ಗಮನಕ್ಕೆ ಬರುತ್ತದೆ.
ಸುದೀಪ್‌ಗೂ ಅದೇ ಸಮಸ್ಯೆ... ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಲಕ್ಕಿ ಸ್ಟಾರ್ ರಮ್ಯಾ ಸೇರಿದಂತೆ ಹಲವು ನಟ-ನಟಿಯರು ಟ್ವಿಟ್ಟರ್-ಫೇಸ್‌ಬುಕ್‌ನಲ್ಲಿ ಲಭ್ಯರಿದ್ದಾರೆ. ಈ ದಿಸೆಯಲ್ಲಿ ಬಹುತೇಕ ಮಂದಿಗೆ ನಕಲಿ ಖಾತೆಗಳದ್ದೇ ತಲೆಬಿಸಿಯಾಗಿದೆ.
ClubForce ಹೆಸರಿನ ಫೇಸ್‌ಬುಕ್ ಖಾತೆಯೊಂದು ಸುದೀಪ್ ಬಗ್ಗೆ ಏನೇನೋ ಮಾಹಿತಿಗಳನ್ನು ನೀಡುವ ಜತೆಗೆ, ಅವರ ಘನತೆಗೆ ತಕ್ಕುದಲ್ಲದ ಸಂದೇಶಗಳನ್ನು ರವಾನಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸುದೀಪ್, ತನ್ನ ಒರಿಜಿನಲ್ ಖಾತೆಯಾಗಿರುವ KicchaSudeepನಲ್ಲಿ 'ClubForce ನಕಲಿ ಖಾತೆ, ನನ್ನದಲ್ಲ' ಎಂದು ಹೇಳಿದ್ದಾರೆ.
ಸುದೀಪ್ ಅವರ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಎರಡೂ ಖಾತೆಗಳು KicchaSudeep ಹೆಸರಿನಲ್ಲಿ ಲಭ್ಯವಿದೆ.
ನಕಲಿ ಖಾತೆ ವಿಚಾರದಲ್ಲಿ ರಮ್ಯಾಗೂ ಅದೇ ಮಂಡೆಬೇನೆ. ಅವರ ಒರಿಜಿನಲ್ ಟ್ವಿಟ್ಟರ್ ಖಾತೆ divyaspandana ಹೆಸರಿನಲ್ಲಿದೆ. ಫೇಸ್‌ಬುಕ್‌ನಲ್ಲಿ ramyaStar ಹೆಸರಿನಲ್ಲಿ ರಮ್ಯಾ ಇದ್ದಾರೆ.
ಆದರೆ group.php?gid=62036206048 ಎಂಬ urlನಲ್ಲಿ ಯಾರೋ ಬೇರೆಯವರು ಪೋಸ್ಟ್ ಮಾಡುತ್ತಿದ್ದಾರೆ. ಅದೇ ರೀತಿ ದಿವ್ಯ ಸ್ಪಂದನ ಎಂಬ ಹೆಸರಿನ ಕೆಲವು ಅಕ್ಷರಗಳನ್ನು ಆಚೀಚೆ ಮಾಡಿ ಹಲವು ಖಾತೆಗಳು ಅಭಿಮಾನಿಗಳನ್ನು ಮೋಸ ಮಾಡುತ್ತಿವೆ.
ಉಪೇಂದ್ರ ಕೂಡ ಇತ್ತೀಚೆಗಷ್ಟೇ ಫೇಸ್‌ಬುಕ್ ಸೇರಿಕೊಂಡಿದ್ದಾರೆ. ಅವರು uppendraa ಹೆಸರಿನಲ್ಲಿ (ಒಂದು P ಮತ್ತು ಒಂದು A ಹೆಚ್ಚುವರಿಯಾಗಿ ಸೇರಿಸಿಕೊಂಡು) ತನ್ನ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ತನ್ನ ಸೂಪರ್ ಚಿತ್ರ ಬಿಡುಗಡೆಯಾಗುವ ಹೊತ್ತಿಗಷ್ಟೇ ಅವರು ಫೇಸ್‌ಬುಕ್‌ಗೆ ಎಂಟ್ರಿ ಕೊಟ್ಟಿದ್ದು.
ಇನ್ನಷ್ಟು ತಾರೆಯರಿಗೂ ಇದೇ ರೀತಿಯ ಸಮಸ್ಯೆಗಳು ಎದುರಾಗುತ್ತಿರಬಹುದು. ಯಾರೋ ಯಾರದೋ ಹೆಸರಿನಲ್ಲಿ ಸಂದೇಶಗಳನ್ನು ನೀಡುತ್ತಿರಬಹುದು. ಹಾಗಾಗಿ ತಾರೆಗಳು ಮತ್ತು ಅಭಿಮಾನಿಗಳು ಈ ಬಗ್ಗೆ ಜಾಗೃತರಾಗಿರಬೇಕಾದ ಅಗತ್ಯವಿದೆ.