ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿನಾಯಕ ಜೋಶಿ ಈಗ ಹೇಗಿದ್ದಾರೆಂದು ನೀವೂ ಒಮ್ಮೆ ನೋಡಿ (Vinayak Joshi | Radio jockey | Kannada actor | Nannaseya Hoove)
ಸುದ್ದಿ/ಗಾಸಿಪ್
Bookmark and Share Feedback Print
 
PR
ಬದಲಾವಣೆಯೆಂದರೆ ಈ ಪರಿಗೂ ಸಾಧ್ಯವಿದೆಯೇ ಎಂದು ಮೂಗಿನ ಮೇಲೆ ಬೆರಳಿಡಬಹುದು. ಆದರೆ ಅಪಮಾನ ಎದುರಾದರೆ, ಕಷ್ಟದಲ್ಲಿದ್ದರೆ, ಎದುರಿಗೊಂದು ಸ್ಪಷ್ಟವಾದ ಗುರಿಯಿದ್ದರೆ ಯಾಕೆ ಸಾಧ್ಯವಿಲ್ಲ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ವಿನಾಯಕ ಜೋಶಿ.

ಹೌದು, ಸಿನಿಮಾ-ನಾಟಕಗಳಲ್ಲಿ ನಟನೆ, ನಿರ್ದೇಶನಗಳ ಅವತಾರಗಳಲ್ಲಿ ಚಿಕ್ಕಂದಿನಲ್ಲೇ ಕಾಣಿಸಿಕೊಂಡು ನಿರಾಸೆ ಅನುಭವಿಸಿದ ಜೋಶಿ ಇಂದು ಗುರುತು ಹಿಡಿಯಲಾಗದಷ್ಟು ಬದಲಾಗಿದ್ದಾರೆ. ದಢಿಯಾ, ಡುಮ್ಮ ಎಂದೆಲ್ಲ ಕರೆಸಿಕೊಳ್ಳುತ್ತಿದ್ದವರು ಇಂದು 'ಸೂಪರ್ ಹೀರೋ' ಎಂದು ಕರೆಯುಂತಾಗಿದ್ದಾರೆ. ಕನ್ನಡದ ಮತ್ತೊಬ್ಬ ಸ್ಮಾರ್ಟ್ ನಟ ಎಂದರೂ ಅಚ್ಚರಿಯಿಲ್ಲ.

ನಮ್ಮೂರ ಮಂದಾರ ಹೂವೇ, ಅಮೃತವರ್ಷಿಣಿಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡು ನಂತರ ಅಪ್ಪು, ಕುರಿಗಳು ಸಾರ್ ಕುರಿಗಳು, ಕಂಠಿ ಮುಂತಾದ ಚಿತ್ರಗಳಲ್ಲಿ ಹಾಸ್ಯಾಸ್ಪದವೆನಿಸುವ ಡುಮ್ಮ ಪಾತ್ರಗಳಲ್ಲಿ ನಗಿಸಿದ್ದ ಜೋಶಿ ಈಗ ಪ್ರಬುದ್ಧರು. ಅಪ್ಪನ ಪಾಕೆಟ್ ಮನಿಯನ್ನು ಮನಬಂದಂತೆ ಖರ್ಚು ಮಾಡಿ, ಹೋದಲ್ಲೆಲ್ಲ ಸಾಲ ಮಾಡಿ 30 ಲಕ್ಷ ರೂಪಾಯಿಗಳ ಭಾರವನ್ನು ತಲೆ ಮೇಲೆ ಹೊತ್ತುಕೊಂಡಿದ್ದವರು ಈಗ ನಿರಾಳರು. ರೇಡಿಯೋ ಜಾಕಿಯಾಗಿ ತನ್ನೆಲ್ಲ ಸಾಲವನ್ನು ಮುಗಿಸಿದ್ದಾರೆ.

'ಕನ್ನಡ ಪ್ರಭ'ದೊಂದಿಗೆ ವಿನಾಯಕ ಜೋಶಿ ಆಡಿರುವ ಮಾತುಗಳನ್ನು ಕೇಳಿ.

ಹೇಳಿ ಕೇಳಿ ಬ್ರಾಹ್ಮಣರ ಮನೆಯ ಹುಡುಗ ನಾನು. ತಿನ್ನುವ ಆಸಕ್ತಿ ಹೆಚ್ಚು. ಚಕ್ಕುಲಿ ನಿಪ್ಪಟ್ ಥರ ಜಂಕ್ ಫುಡ್ ತಿಂದ್ಕೊಂಡು ದಪ್ಪ ಆಗಿದ್ದೆ. ಸಣ್ಣವನಿದ್ದಾಗ ಅಮ್ಮ ಎರಡು ಬೆಲ್ಟ್ ಸೇರಿಸಿ ನನ್ನ ಸೊಂಟಕ್ಕೆ ಹಾಕ್ತಿದ್ರು. ಎಲ್ಲರೂ ಡುಮ್ಮ, ದಢಿಯಾ, ಅಕ್ಕಿಮೂಟೆ ಅಂತಿದ್ರು. ಅದರಲ್ಲೂ ಹುಡುಗೀರ ಮುಂದೆ ಬಂದಾಗ ಬೇಜಾರಾಗುತ್ತಿತ್ತು.
PR

ಅಪ್ಪ-ಅಮ್ಮನಿಗೆ ನನ್ನ ಕಂಡ್ರೆ ಪ್ರೀತಿ. ನನ್ನನ್ನು ಹೀರೋ (ನನ್ನಾಸೆಯ ಹೂವೇ) ಮಾಡಬೇಕೂಂತ ಹೊರಟ್ರು. ಆ ಸಮಯದಲ್ಲಿ ಯಾರ ಬೆಂಬಲವೂ ಸಿಗಲಿಲ್ಲ. ಸಿನಿಮಾ ನೋಡದೇ ಇದ್ದವರೂ ಈ ಡುಮ್ಮನ ಸಿನಿಮಾ ಯಾರು ನೋಡ್ತಾರೆ ಅಂತ ಗೇಲಿ ಮಾಡಿದ್ರು. ಆ ಸಿನಿಮಾ ಸೋತಿದ್ದರಿಂದ ನನಗೆ ಸಣ್ಣ ಪಾತ್ರಗಳೂ ಸಿಗಲಿಲ್ಲ. ಅದೇ ಸಮಯದಲ್ಲಿ ಅಪ್ಪ ಹೋಗ್ಬಿಟ್ರು.

ಅದರ ನಂತರ ಎದುರು ಸಿಕ್ಕವರು ಸಿಂಪಥಿಯ ಮಾತುಗಳನ್ನಾಡಿ ಬದಿಗೆ ಹೋಗುತ್ತಿದ್ದರು. ಹೆಚ್ಚು ಮಾತಾಡಿದ್ರೆ ಕಾಸು ಕೇಳ್ತಾನೆ ಅನ್ನೋದು ಅವರ ಭಯ. ಕೆಲವರಾದರೂ ಸಹಕಾರ ಮಾಡುವರೆಂಬ ನಿರೀಕ್ಷೆ ಹುಸಿಯಾಯಿತು. ಆದರೆ ಸುದೀಪ್, ಪುನೀತ್ ಕೈ ಬಿಡಲಿಲ್ಲ. ಕೆಲವು ಸ್ನೇಹಿತರೂ ಸಾತ್ ನೀಡಿದರು. ಸಾಲ ತೀರಿಸಲೇಬೇಕು ಎಂದು ನಿರ್ಧರಿಸಿ ಆರ್‌ಜೆ ಆದೆ. ಎರಡೇ ವರ್ಷದಲ್ಲಿ ಸಾಲ ಮುಗಿಸಿದ್ದೇನೆ.

ನನ್ನ ಔಟ್‌ಲುಕ್ ಬದಲಾವಣೆಗೆ ಕೇವಲ ವರ್ಕ್ ಔಟ್, ಡಯಟ್ ಮಾತ್ರ ಕಾರಣವಲ್ಲ. ನನ್ನೊಳಗಿನ ಮೋಟಿವೇಶನ್ ಫ್ಯಾಕ್ಟರ್ ಕಾರಣ. ಯಾರಿಗಿಂತ ನಾನು ಕಮ್ಮಿ ಇಲ್ಲ ಎಂಬ ನಂಬಿಕೆ ಜತೆಗಿತ್ತು. ಆದರೆ ದೇಹತೂಕ ಅಡ್ಡಿಯಾಗಿತ್ತು. ನನಗೆದುರಾದ ಅಪಮಾನಗಳನ್ನು ಸ್ಫೂರ್ತಿಯಾಗಿ ಪರಿಗಣಿಸಿ ದಿನಾ ಓಡಲು ಶುರು ಮಾಡಿದೆ. 115 ಕೆ.ಜಿ.ಯಿದ್ದ ದೇಹವನ್ನು ಬರೋಬ್ಬರಿ 40 ಕೆ.ಜಿ. ಇಳಿಸಿಕೊಂಡೆ. ಆ ಹೊತ್ತಿಗೆ ಆತ್ಮವಿಶ್ವಾಸವೂ ಹೆಚ್ಚಿತು.

ಈಗ ಯಾರೂ ನನ್ನನ್ನು ತೂಕದ ಹೆಸರಿನಲ್ಲಿ, ದೇಹದ ಆಕಾರದ ಹೆಸರಿನಲ್ಲಿ ತಮಾಷೆ ಮಾಡಲಾರರು ಎಂಬ ಮಟ್ಟಕ್ಕೆ ಮು್ಟಟಿದ್ದೇನೆ. ನನ್ನ ಪ್ರಪೋಸಲ್ ತಿರಸ್ಕರಿಸಿದ ಹುಡುಗಿಯರು ಇಂದು ಹೊಟ್ಟೆಕಿಚ್ಚುಪಡುವಂತಿದ್ದೇನೆ. ಅಸಾಧ್ಯವೆನಿಸಿದ್ದನ್ನು ಸಾಧಿಸಿದ್ದೇನೆ. ನಿಜಕ್ಕೂ ಸಂತೋಷವಾಗುತ್ತಿದೆ.

ಈಗ ಸಿನಿಮಾದಲ್ಲಿ ದೊರಕುವ ಯಾವುದೇ ಅವಕಾಶಕ್ಕೆ ಸಿದ್ಧನಾಗಿದ್ದೇನೆ. ರಿಯಾಲಿಟಿ ಶೋಗಳಿಗೂ ಆಹ್ವಾನ ಬರುತ್ತಿದೆ. ನಾಲ್ಕು ವರ್ಷಗಳ ನಂತರ ಕಿರುತೆರೆಗೆ 'ಸರಿಗಮಪ' ಮೂಲಕ ಪ್ರವೇಶಿಸಿದ್ದೇನೆ.

ಇವು ವಿನಾಯಕ ಜೋಶಿ ಮಾತುಗಳು. ಖಂಡಿತಾ ಅವರ ಅನುಭವ ಇನ್ನೊಬ್ಬರಿಗೆ ಪಾಠವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಮಾಜ ಅವರನ್ನು ನೋಡಿದ ರೀತಿಯಿಂದ ಕಂಗೆಡದೆ ಬದಲಾವಣೆಗೆ ತನ್ನನ್ನೇ ಒಡ್ಡಿಕೊಂಡು ಯಶಸ್ವಿಯಾಗಿದ್ದಾರೆ.

ಅವರ ಮುಂದಿನ ಜೀವನವೂ ಹೋರಾಟದಿಂದ ಮುಕ್ತವಾಗಿರಲಾರದು. ಆದರೆ ಈಗ ಯಶಸ್ಸು ಪಡೆದೇ ತೀರುವ ಆತ್ಮವಿಶ್ವಾಸ ಅವರಲ್ಲಿದೆ. ಅದಷ್ಟೇ ಸಾಕು, ಗೆಲುವು ಹಿಂಬಾಲಿಸುತ್ತದೆ ಎನ್ನುವ ಭರವಸೆ ಅವರದ್ದು. ಅದು ಸುಳ್ಳಾಗದಿರಲಿ ಎಂದು ನೀವೂ ಹಾರೈಸಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿನಾಯಕ ಜೋಶಿ, ರೇಡಿಯೋ ಜಾಕಿ, ಕನ್ನಡ ನಟ, ನನ್ನಾಸೆಯ ಹೂವೇ