ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಬಹಳ ಕಾನ್ಪಿಡೆಂಟಾಗಿದೆ. ಇದರಿಂದ ಪುಳಕಗೊಂಡಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಪಿಡಾ) ಹೊಸ ವರ್ಷದ ಆರಂಭದಲ್ಲೇ ವರ್ಣರಂಜಿತ ಸಮಾರಂಭ ಮಾಡಲು ಹೊರಟಿದೆ.
ನಿರ್ದೇಶಕ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ ನೇತೃತ್ವದಲ್ಲಿ ರಂಗು ರಂಗಿನ ಬೃಹತ್ ಕಾರ್ಯಕ್ರಮ ನಡೆಯಲಿದೆ. ಸ್ಯಾಂಡಲ್‌ವುಡ್ ಇತ್ತೀಚಿನ ದಿನಗಳಲ್ಲಿ ಬಹಳ ಜೋಶ್‌ನಲ್ಲಿದೆ. ಈ ಬೆಳವಣಿಗೆಗೆ ಇಡೀ ಚಿತ್ರೋದ್ಯಮ ಮಂದಿಯ ಪರಿಶ್ರಮವೇ ಕಾರಣ. ಇದಕ್ಕಿಂತಲೂ ಹೆಚ್ಚಿಗೆ ನಿರ್ದೇಶಕರ ಕಾಳಜಿ. ಆ ನಿಟ್ಟಿನಲ್ಲಿ ಕಾರ್ಯಕ್ರಮ ಮಹತ್ವ ಪಡೆದುಕೊಳ್ಳಲಿದೆ.
ಈ ಸಂತಸದಲ್ಲಿ ನಿರ್ದೇಶಕ ಸಂಘ ಒಂದು ಸಂಭ್ರಮ ಆಚರಿಸಲು ನಿರ್ಧರಿಸಿದೆ. ಆದರೆ, ಇದಕ್ಕಿನ್ನೂ ಡೇಟ್ ನಿಗದಿಯಾಗಿಲ್ಲ. ನಿರ್ದೇಶಕರೆಲ್ಲರೂ ಸೇರಿ ಪ್ರೀತಿಯಿಂದ ಆಚರಿಸುತ್ತಿರುವ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗಿದೆ. ಇಷ್ಟೇ ಅಲ್ಲ ಈ ಕಾರ್ಯಕ್ರಮಕ್ಕೆ ಬಾಲಿವುಡ್, ಟಾಲಿವುಡ್, ಕಾಲಿವುಡ್‌ನ ಖ್ಯಾತ ನಿರ್ದೇಶಕರು ಬರುತ್ತಿದ್ದಾರೆ.
'ಮುನ್ನಾಭಾಯಿ', '3 ಈಡಿಯಟ್ಸ್' ಖ್ಯಾತಿಯ ನಿರ್ದೇಶಕ ರಾಜ್‌ಕುಮಾರ್ ಇರಾನಿ ಹಾಗೂ ಆಪ್ತಮಿತ್ರ, ಆಪ್ತರಕ್ಷಕ ನಿರ್ದೇಶಕ ಪಿ. ವಾಸು ಅವರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ. ಚಿತ್ರರಂಗದ ಗಣ್ಯರು, ಕಲಾವಿದರು, ನಿರ್ಮಾಪಕರು, ತಾಂತ್ರಿಕ ವರ್ಗದವರನ್ನು ಒಂದೆಡೆ ಸೇರಿಸುವ ಉದ್ದೇಶ ನಿರ್ದೇಶಕರ ಸಂಘದ್ದು.
ಕಾನ್ಫಿಡಾದಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ 17. ಇವರಲ್ಲಿ ನಾಲ್ಕು ಮಂದಿ ಮುಂದೆ ಬಂದು ಸ್ವತಃ ಚಿತ್ರರಂಗದ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕಾರ್ಯಕ್ರಮವೆಂದು ವೇದಿಕೆಯಲ್ಲಿ ಮಿಂಚಲು ಇವರು ಮುಂದಾಗುತ್ತಿಲ್ಲ. ಎಲ್ಲಾ 17 ಸದಸ್ಯರು ವೇದಿಕೆಯ ಹೊರಗಿನ ಜವಾಬ್ದಾರಿಗಳನ್ನು ನೋಡಿಕೊಳ್ಳಲಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನಲ್ಲಿರುವ ಗಾಯತ್ರಿ ವಿಹಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕರನ್ನು ಸನ್ಮಾನಿಸುವುದು ಸೇರಿದಂತೆ, ಹೆಸರಾಂತ ಕಲಾವಿದರಿಂದ ಸಾಂಸ್ಕ್ಕತಿಕ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ.
ಇದಕ್ಕೆ ತಗಲುತ್ತಿರುವ ಒಟ್ಟು ಖರ್ಚು ಸುಮಾರು ಎರಡು ಕೋಟಿ ರೂಪಾಯಿಗಳು.