ಮಾನಸಿಕ ಮತ್ತು ದೈಹಿಕ ಬದಲಾವಣೆಯ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಯೋಗವನ್ನು ಶಿಕ್ಷಣದಲ್ಲಿ ಅಳವಡಿಸಿ, ಆ ಮೂಲಕ ಮಕ್ಕಳಲ್ಲಿ ಏಕಾಗ್ರತೆ ಮೂಡಿಸಲು ಚಿಂತನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಯೋಗಾಸನ ಶಿಕ್ಷಕಿಯಾಗಿ ಮಾದಕನಟಿ ನಮಿತಾ ನಟಿಸುತ್ತಿರುವ 'ನಮಿತಾ ಐ ಲವ್ ಯೂ' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿ ವಯಸ್ಕರಿಗೆ ಮಾತ್ರ ಎಂದಿರುವುದು ವಿಪರ್ಯಾಸವೇ ಸರಿ ಎನ್ನುತ್ತಿದ್ದಾರೆ ನಮಿತಾ ಅಭಿಮಾನಿಗಳು. ಅಂದಹಾಗೆ ಅವರೇನು ಹಿರಿಯರಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ನಟಿ ನಮಿತಾ ಕಲಿಸುವ ಯೋಗಾಸನವನ್ನು ಮಕ್ಕಳಿಗೂ ತೋರಿಸಲು ಉತ್ಸುಕರಾಗಿದ್ದ ಪೋಷಕರಿಗೂ ನಿರಾಶೆಯಾಗಿದೆ. ಆರಂಭದಲ್ಲಿ 'ನಮಿತಾ ಐ ಲವ್ ಯು' ಚಿತ್ರವನ್ನು ಎಲ್ಲರೂ ನೋಡುವಂತೆ ಶಿಸ್ತು ಬದ್ಧವಾಗಿಯೇ ಚಿತ್ರೀಕರಿಸಲಾಯಿತಾದರೂ, ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಕೆರಳಿದ ಆಸಕ್ತಿ ನಮಿತಾ ಮಾಡುವ ಯೋಗವನ್ನು ಎಲ್ಲಾ ದಿಕ್ಕಿನಿಂದಲೂ ಚಿತ್ರೀಕರಿಸುವಂತೆ ಮಾಡಿತ್ತು.
ಇದು ಅತಿರೇಕಕ್ಕೆ ಹೋದಾಗ ಎಚ್ಚೆತ್ತ ಸೆನ್ಸಾರ್ ಮಂಡಳಿ, ಕತ್ತರಿ ಪ್ರಯೋಗಿಸಿ 'ಎ' ಸರ್ಟಿಫಿಕೇಟ್ ನೀಡಿದೆ. ಆನಂತರ ಜ್ಞಾನೋದಯವಾದಂತಾದ ಗಾಂಧೀನಗರ, ಹೌದಲ್ಲಾ, ಯೋಗಾಸನದ ಹೆಸರಲ್ಲಿ ಅಶ್ಲೀಲತೆಯನ್ನು ಬಿಂಬಿಸಬಾರದೆಂದು ಉಪದೇಶ ನೀಡುತ್ತಿದೆ. ಏನೇ ಇರಲಿ....
ಚಿತ್ರದ ಕತೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ನಿರ್ದೇಶನ, ನಿರ್ಮಾಣ ಹೀಗೆ ಎಲ್ಲಾ ಹೊರೆಯನ್ನೂ ಜಯಸಿಂಹ ಪಿಕ್ಚರ್ಸ್‌ನ ರವಿತೇಜ ರೆಡ್ಡಿ ಹೊತ್ತುಕೊಂಡಿದ್ದರೂ 'ನಮಿತಾ ಐ ಲವ್ ಯು' ಚಿತ್ರದ ಕೇಂದ್ರ ಬಿಂದು ನಮಿತಾ. ನಮಿತಾ ಇಲ್ಲದಿದ್ದರೆ ಚಿತ್ರವನ್ನು ಊಹಿಸುವುದೂ ಕಷ್ಟ ಎನ್ನುತ್ತಿದ್ದೆ ಸಿನಿ ವಲಯ. ಮಾದಕ ನಟಿಯಾಗಿ ಇನ್ನು ಮುಂದೆ ನಟಿಸುವುದಿಲ್ಲ, ಹಾಗೂ ಮಹಿಳಾ ಪ್ರಧಾನ ಸಾಹಸ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದಿದ್ದೇನೆ ಎಂದಿದ್ದ ನಮಿತಾ ಅವರು ಯೋಗಾಸನ ಟೀಚರ್ ಪಾತ್ರ ಎಂದಾಗ ಒಪ್ಪಿಕೊಂಡಿದ್ದರು.
ಇನ್ನೇನು ಯೋಗಾ ಟೀಚರ್ ಬರೇ ಯೋಗಮಾತ್ರ ಕಲಿಸಿದ್ರೆ ಹೇಗೆ ಎಂದು ಅರಿತ ನಿರ್ಮಾಪಕರು ಥ್ರಿಲ್ಲರ್ ಮಂಜು ಮತ್ತು ರಾಜೇಶ್ ಬ್ರಹ್ಮಾವರ್ ಅವರನ್ನು ಕರೆಸಿ ನಮಿತಾಗೆ ಫೈಟಿಂಗ್ ಮತ್ತು ನೃತ್ಯ ಕಲಿಸಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಬಣ್ಣ, ರುಚಿ, ಶಕ್ತಿ ಎಂಬಂತೆ ಯೋಗ, ಡ್ಯಾನ್ಸು, ಪೈಟಿಂಗ್ ಎಲ್ಲವೂ ಇದೆ. ಒಟ್ಟಾರೆ ಇದೊಂದು ಮನರಂಜನೆಯ ಚಿತ್ರ.