ಮಾದಕ ಚೆಲುವೆ ನಮಿತಾ ಡಿಶುಂ ಡಿಶುಂ ಫೈಟ್ ಮಾಡಿದ್ದಾರೆ. ಮಾದಕ ದ್ರವ್ಯ ಮಾರಾಟ ಮಾಡುವ ಮಾಫಿಯಾವನ್ನು ಮಟ್ಟ ಹಾಕಲು ನಮಿತಾ ಡಿಶುಂ ಡಿಶುಂ ಮಾಡಿರುವುದು 'ನಮಿತಾ ಐ ಲವ್ ಯು' ಚಿತ್ರದಲ್ಲಿ. ಫೈಟ್‌ನಲ್ಲಿ ನಮಿತಾ ಇನ್ನಷ್ಟು ಮಾದಕವಾಗಿ ಕಾಣಲಿದ್ದು ಖಂಡಿತಾ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯಲಿದ್ದಾರೆ ಎಂದಿದ್ದಾರೆ 'ನಮಿತಾ ಐ ಲವ್ ಯು' ಚಿತ್ರದ ನಿರ್ದೆಶಕ ಜಯಸಿಂಹ ರೆಡ್ಡಿ.
ನಮಿತಾ ಅಂದರೆ ಸಾಕು ಪಡ್ಡೆಗಳ ಭಾವ ಲಹರಿಯ ಮೇಲೆ ಆಕೆಯ ಪ್ರಮಾಣಬದ್ಧವಾದ ಮೈಕಟ್ಟು ತೇಲಿಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸೆಕ್ಸ್ ಸಿಂಬಲ್ ಎಂದೇ ಗುರುತಿಸಿಕೊಂಡಿರುವ ನಮಿತಾ ಕನ್ನಡ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳತೊಡಗಿದ್ದು ಆಕೆಯ ಹೆಸರಿನಲ್ಲೇ ತಯಾರಿಸಲಾಗುತ್ತಿರುವ 'ನಮಿತಾ ಐ ಲವ್ ಯು' ಅಪ್ಪಟ ಸ್ವಮೇಕ್ ಚಿತ್ರವಾಗಿದೆ. ನಮಿತಾ ಹೊರತುಪಡಿಸಿ ಉಳಿದ ಬಹುತೇಕ ಕಲಾವಿದರು ಹೊಸಬರಾದರೂ ಅವರೆಲ್ಲ ಇಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರಂತೆ.
ಯುವ ಪೀಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು 'ನಮಿತಾ ಐ ಲವ್ ಯು' ಚಿತ್ರವನ್ನು ನಿರ್ಮಿಸಲಾಗಿದೆ. ಪ್ರೀತಿಯೇ ಅಂತಿಮ ಎಂದು ಭಾವಿಸುವ ಕಾಲೇಜ್ ವಿಧ್ಯಾರ್ಥಿಗಳು ಅದೇ ಗುಂಗಿನಲ್ಲಿ ಮಾದಕ ದ್ರವ್ಯ ಸೇವನೆಯ ಚಟಕ್ಕೆ ಬೀಳುತ್ತಾರೆ.
ಯುವ ಜನಾಂಗದ ಮನಃ ಪರಿವರ್ತನೆ ಮಾಡುವ ಮಹತ್ವದ ಜವಾಬ್ದಾರಿಯನ್ನು ನಮಿತಾ ಈ ಚಿತ್ರದಲ್ಲಿ ನಿರ್ವಹಿಸಿದ್ದಾರೆ ಎಂದು ಜಯಸಿಂಹ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಆದರೆ ನಮಿತಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರಲಿಲ್ಲ.
'ನಮಿತಾ ಐ ಲವ್ ಯು' ಚಿತ್ರದಲ್ಲಿ ನಮಿತಾಗೆ ಯೋಗ ಅಧ್ಯಾಪಕಿಯ ಪಾತ್ರ. ಯೋಗ ಟೀಚರ್ ಪಾತ್ರದಲ್ಲಿ ನಮಿತಾ ಹೇಗೆ ಕಾಣಬಹುದು? ಊಹಿಸಿಕೊಂಡರೆ ರಸಿಕರ ಎದೆಬಡಿತ ಏರುಪೇರಾಗಬಹುದು. ನಮಿತಾ ಕೇವಲ ಯೋಗಾಭ್ಯಾಸ ಮಾಡಿಸುವುದಷ್ಟೇ ಅಲ್ಲದೆ ಡ್ರಗ್ ಮಾಫಿಯಾ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಾರೆ.
ಚಿತ್ರದಲ್ಲಿ ಬ್ಯಾಂಕ್ ಜನಾರ್ದನ್ ಲೆಕ್ಚರರ್ ಪಾತ್ರದಲ್ಲಿ, ಗೊಲ್ಲಹಳ್ಳಿ ಶಿವಪ್ರಸಾದ್ ಪ್ರಿನ್ಸಿಪಾಲ್ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದ ಜೊತೆ ಕಥೆ ಮತ್ತು ಸಂಗೀತವೂ ಜಯಸಿಂಹ ರೆಡ್ಡಿ ಅವರದು. ಪೃಥ್ವೀರಾಜ್, ಕಮಲ್, ಅಮಿತ್, ಶಿವರಾಜ್, ವಿಜಯ ರಘು ಅವರು ಕಾಲೇಜ್ ವಿಧ್ಯಾರ್ಥಿಗಳಾಗಿ ನಟಿಸಿದ್ದಾರೆ. ಇತರ ಪಾತ್ರಗಳಲ್ಲಿ ಶೋಭಿನಾ, ಕವಿತಾ, ಅನು, ಶ್ರೀಕಾಂತ್, ಟೆನಿಸ್ ಕೃಷ್ಣ ಮುಂತಾದವರಿದ್ದಾರೆ. ದಿವಾಕರ್ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಏಳು ಹಾಡುಗಳಿವೆ.
ಥ್ರಿಲ್ಲರ್ ಮಂಜು ಅವರು ನಮಿತಾಗೆ ಫೈಟ್ ಹೇಳಿಕೊಟ್ಟಿದ್ದಾರೆ. ಮುಂದಿನ ತಿಂಗಳಲ್ಲಿ ಚಿತ್ರೀಕರಣ ಪೂರೈಸಿ ಆದಷ್ಟು ಶೀಘ್ರ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕ ಎಂ.ರವಿತೇಜ ರೆಡ್ಡಿ ತಿಳಿಸಿದರು.