ಈ ವಾರ ಮೂರು ಚಿತ್ರಗಳು ಬಿಡುಗಡೆಯಾಗುತ್ತಿದೆ. ಹರೀಶ್ ರಾಜ್ ನಟಿಸಿ, ನಿರ್ದೇಶಿಸಿದ ಕಲಾಕಾರ್, ನನ್ನುಸಿರೇ ಚಿತ್ರದಲ್ಲಿ ನಾಯಕನಾಗಿ ನಟಿಸಿದ ರಾಹುಲ್ ಅವರ ಅಭಿಮಾನಿ ಹಾಗೂ ಆನಂದ್ ನಾಯಕನಾಗಿ ನಟಿಸಿದ ನನ್ನೆದೆಯ ಹಾಡು ಚಿತ್ರ ಈ ವಾರ ಬಿಡುಗಡೆಯಾಗಲಿದೆ.
ಕಲಾಕಾರ್ ಚಿತ್ರವನ್ನು ಹರೀಶ್ ರಾಜ್ ಸ್ವತ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸಿಲ್ಲದ್ದಲ್ಲದೇ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ಸುಮನ್ ರಂಗನಾಥ್ ಹಾಗೂ ಪೂಜಾಗಾಂಧಿ ತಂಗಿ ರಾಧಿಕಾ ಗಾಂಧಿ ನಾಯಕಿಯರಾಗಿ ನಟಿಸಿದ್ದಾರೆ.
ಚಿತ್ರದ ಸಾಹಿತ್ಯ ವಿಭಾಗದಲ್ಲೂ ಹರೀಶ್ ರಾಜ್ ಅವರು ಕೈ ಯಾಡಿಸಿದ್ದಾರೆ. ಈ ಚಿತ್ರ ಗೆದ್ದರೆ ಗಾಂಧಿನಗರದಲ್ಲಿ ಮತ್ತೆ ತಮ್ಮ ಛಾಪನ್ನು ತೋರಿಸಬಹುದು. ಈ ವಾರ ಬಿಡುಗಡೆಯಾಗುತ್ತಿರುವ ಮತ್ತೊಂದು ಚಿತ್ರ ಅಭಿಮಾನಿ. ಯುವಕನೊಬ್ಬ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿ ಅವರ ಚಿತ್ರಗಳನ್ನೇ ನೋಡುತ್ತಾ ಬೆಳೆದು ಸಮಾಜದಲ್ಲಿ ಯಾವ ರೀತಿ ಉತ್ತಮ ವ್ಯಕ್ತಿಯಾಗುತ್ತಾನೆ ಎಂಬುದು ಚಿತ್ರದ ಕಥಾವಸ್ತು.
ಯು2 ವಾಹಿನಿಯಲ್ಲಿ ನಿರೂಪಕನಾಗಿರುವ ರಾಹುಲ್ ಈ ಚಿತ್ರದ ನಾಯಕ. ಈ ಹಿಂದೆ ಇವರು ನಟಿಸಿದ ನನ್ನುಸಿರೇ ಚಿತ್ರದ ಬಗ್ಗೆ ವಿಮರ್ಶಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದರೂ ಚಿತ್ರ ಮಾತ್ರ ಥಿಯೇಟರ್ನಲ್ಲಿ ನಿಲ್ಲಲಿಲ್ಲ. ಈಗ ಈ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಅಭಿಮಾನಿಗೆ ಅಭಿಮಾನಿ ದೇವರುಗಳ ಪ್ರತಿಕ್ರಿಯೆ ಹೇಗಿರುತ್ತೇ ಎಂಬುದಕ್ಕೆ ಶುಭ ಶುಕ್ರವಾರದವರೆಗೆ ಕಾದು ನೋಡಬೇಕು.
ಈ ವಾರ ಬಿಡುಗಡೆಯ ಭಾಗ್ಯ ಕಾಣಲಿರುವ ಮತ್ತೊಂದು ಚಿತ್ರ ನನ್ನೆದೆಯ ಹಾಡು. ಮನಸಿನ ಮಾತು ಮಧುರ ಎಂಬ ತೋಪು ಚಿತ್ರದಲ್ಲಿ ನಟಿಸಿದ ಆನಂದ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇಲ್ಲಿ ಅವರಿಗೆ ಕ್ಯಾಂಟೀನ್ ಬಾಯ್ ಪಾತ್ರವಂತೆ. ತ್ರಿಕೋನ ಪ್ರೇಮಕಥೆಯಿರುವ ಈ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೋ ಕಾದು ನೋಡಬೇಕು.