ಡಬ್ಬಾದಲ್ಲಿ ಕೊಳೆಯುತ್ತಿದ್ದ ಗಾಂಧಿನಗರದ ಮತ್ತೊಂದು ವಿಶಿಷ್ಟ ಚಿತ್ರ ಎಂದು ಈಗಾಗಲೇ ಹೆಸರು ಪಡೆದಿರುವ 'ಬಿಸಿಲೆ' ಈ ವಾರ (ನವೆಂಬರ್ 26) ತೆರೆ ಕಾಣುತ್ತಿದೆ.
ದೂದ್‌ಪೇಡ ದಿಗಂತ್ ಮತ್ತು ಚೆಲ್ಲು ಹುಡುಗಿ ಜೆನಿಫರ್ ಕೊತ್ವಾಲ್ ಅಭಿನಯದ ಬಿಸಿಲೆ ನಿರ್ದೇಶಕ ಸಂದೀಪ್ ಎಸ್. ಗೌಡ. ಕೆಲವು ಹಾಡುಗಳು ಈಗಾಗಲೇ ಜನಪ್ರಿಯವಾಗಿರುವುದರಿಂದ ಚಿತ್ರ ಹಿಟ್ ಆಗಲಿದೆ ಎನ್ನುವುದು ನಿರ್ದೇಶಕರ ವಿಶ್ವಾಸ.
ಪ್ರೇಮಕಥೆಯನ್ನು ಹೊಂದಿರುವ ಚಿತ್ರ ತುಂಬಾ ಸಿಂಪಲ್. ಪ್ರಯಾಣದ ಅವಧಿಯಲ್ಲಿ ಹುಡುಗ-ಹುಡುಗಿಯ ನಡುವೆ ಅರಳುವ ಪ್ರೀತಿಯನ್ನು ಸುಂದರವಾಗಿ ತೋರಿಸಲಾಗಿದೆ.
ಹುಡುಗ ಮತ್ತು ಹುಡುಗಿ ಬಿಸಿಲೆ ಘಾಟಿಗೆ ಹೋಗಿರುತ್ತಾರೆ. ಆದರೆ ದಾರಿ ತಪ್ಪುತ್ತಾರೆ. ಈ ಅವಧಿಯಲ್ಲಿ ಅವರು ಹೇಗೆ ಪ್ರೀತಿಯಲ್ಲಿ ಒದ್ದಾಡುತ್ತಾರೆ, ಬೀಳುತ್ತಾರೆ ಎಂಬುದನ್ನು ಕುತೂಹಲಕಾರಿಯಾಗಿ, ಭಿನ್ನವಾಗಿ ನಿರೂಪಿಸಲಾಗಿದೆ ಎಂದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಸಂದೀಪ್ ಹೇಳಿದ್ದಾರೆ.
ಕಿರಣ್ ಪಿ. ರೆಡ್ಡಿ ಮತ್ತು ಚಂದ್ರು ಟಿ. ಗೌಡ ಇದರ ನಿರ್ಮಾಪಕರು. ನಿರಂಜನ್ ಬಾಬು ಕ್ಯಾಮರಾಮ್ಯಾನ್, ಶಿವರಾಜ್ ಮೆಹು ಸಂಕಲನಕಾರರಾಗಿರುವ ಚಿತ್ರದ ಸುಂದರ ಗೀತೆಗಳಿಗೆ ಮಟ್ಟುಗಳನ್ನು ಹಾಕಿರುವವರು ಗಗನ್-ಹರಿ ಜೋಡಿ.
ತಾರಾಗಣದಲ್ಲಿ ದ್ವಾರಕೀಶ್, ಲಕ್ಷ್ಮೀ ದೇವಿ, ಚಿತ್ರಾ ಶೆಣೈ, ಸುನೇತ್ರಾ ಪಂಡಿತ್, ಉಮೇಶ್ ಮತ್ತು ನಮೃತಾ ಇದ್ದಾರೆ. ದಿವಂಗತ ಮೈನಾ ಚಂದ್ರು ಅವರ ಕೊನೆಯ ಚಿತ್ರವೂ ಹೌದು.