ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 99ನೇ ಚಿತ್ರ 'ಮೈಲಾರಿ' ನಿಮ್ಮ ಊರಿಗೆ ಇದೇ ತಿಂಗಳ 17ರಂದು ಬರಲಿದ್ದಾನೆ. ಈಗಾಗಲೇ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿರುವ ಮೈಲಾರಿಯ ಹಾಡುಗಳು ಸೂಪರ್ ಹಿಟ್ ಆಗಿವೆ. ಇನ್ನುಳಿದದ್ದು ಪ್ರೇಕ್ಷಕರ, ಅಭಿಮಾನಿಗಳ ಕೈಯಲ್ಲಿದೆ.
ಅದೇನೆ ಇರಲಿ. ಕನ್ನಡ ಚಿತ್ರರಂಗಕ್ಕಂತೂ ಇದೊಂದು ಪರ್ವ ಕಾಲ ಅಂತಲೂ ಹೇಳಬಹುದು. ಏಕೆಂದರೆ, 2010ರಲ್ಲಿ ಬಿಡುಗಡೆಯಾದ ಹಲವಾರು ಚಿತ್ರಗಳು ಸಕ್ಸಸ್ ಕಂಡಿವೆ. ಅಲ್ಲದೆ ಕೆಲ ಚಿತ್ರಗಳು ಇತರೆ ಭಾಷೆಗಳಿಗೆ ರಿಮೇಕ್ ಆಗಲು ಹೊರಟಿವೆ. 'ಜಾಕಿ', 'ಸೂಪರ್', 'ಪಂಚರಂಗಿ' ಚಿತ್ರಗಳನ್ನು ಕನ್ನಡಿಗರು ಮೆಚ್ಚಿದ್ದಾರೆ. ನಿರ್ಮಾಪಕ ಗಲ್ಲಾಪೆಟ್ಟಿಗೆ ತುಂಬಿ ತುಳುಕುತ್ತಿದೆ. ಜನ ಸ್ವೀಕರಿಸಿರುವ ರೀತಿ ನೋಡಿದರೆ ಮೈಲಾರಿಯೂ ಇದೇ ಸಾಲಿಗೆ ಸೇರ್ಪಡೆಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ನಿರ್ದೇಶಕ ಆರ್. ಚಂದ್ರು ಶಿವಣ್ಣನನ್ನು ಕಲರ್ಫುಲ್ ಆಗಿ 'ಮೈಲಾರಿ'ಯಲ್ಲಿ ಬಿಂಬಿಸಿರುವುದು ವಿಶೇಷ. ಚಿತ್ರರಸಿಕರಿಗಂತೂ ರಸದೌತಣ. ಅದಕ್ಕಿಂತಲೂ ದೊಡ್ಡ ವಿಚಾರವೆಂದರೆ ಮೈಲಾಪುರದ ಮೈಲಾರಿ ತೆರೆಗೆ ಬರುವ ಮುನ್ನವೇ ನಿರ್ಮಾಣ ಸಂಸ್ಥೆ ಸೇಫ್ ಆಗಿರುವುದು.
ಈಗಾಗಲೇ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ಸೆಂಟರುಗಳಲ್ಲಿ ಈ ಚಿತ್ರ ಒಳ್ಳೆಯ ಬೆಲೆಗೆ ಮಾರಾಟ ಆಗಿದೆ. ಆ ಮೂಲಕ ನಿರ್ಮಾಪಕರು ಸೇಫ್ ಆಗಿದ್ದಾರಂತೆ.
ಶಿವರಾಜ್ ಕುಮಾರ್ ಅಭಿನಯದ 'ಅಣ್ಣತಂಗಿ' ಹಾಗೂ 'ಜೋಗಿ' ಚಿತ್ರಗಳ ನಂತರ 'ಮೈಲಾರಿ' ಬಿಡುಗಡೆಗೆ ಮೊದಲೇ ಸುದ್ದಿಯಾಗಿರುವುದರ ಜತೆಗೆ ಸೇಫ್ ಆಗಿರುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ನಿರ್ಮಾಪಕರು.
ಇನ್ನೊಂದು ಸಿಹಿ ಸಂಗತಿ ಏನೆಂದರೆ ಇದು ಶಿವಣ್ಣ ಅವರ 99ನೇ ಚಿತ್ರವಾಗಿರುವುದರಿಂದ 99 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ. ಹೀಗೆಂದು ಹೇಳುತ್ತಿರುವುದು ನಿರ್ದೇಶಕ ಚಂದ್ರು ಹಾಗೂ ನಿರ್ಮಾಪಕ ಶ್ರೀಕಾಂತ್.