ಈಗಾಗಲೇ ಸಾಕಷ್ಟು ಚಿತ್ರಗಳು ಬಂದ ಮಾರ್ಗದಲ್ಲೇ ಜೋಕಾಲಿಯೂ ಬಂದಿದೆ. ಹಾಗೆ ಬಂದು ಹೀಗೆ ಹೋಗುವ ಚಿತ್ರಗಳ ಪಟ್ಟಿಯಲ್ಲಿ ಇದೂ ಒಂದು. ನಾಯಕ ಚಿತ್ರ ಮಂದಿರದಲ್ಲಿ ಟಿಕೆಟ್ ಹರಿಯುವ ಹುಡುಗ, ನಾಯಕಿ ಊರ ರಾಜಕಾರಣಿಯ ತಂಗಿ. ಇವರ ನಡುವೆ ಅಂಕುರವಾಗುವ ಪ್ರೇಮಕ್ಕೆ ಹೆಣೆದ ಕಥೆಯೇ ಜೋಕಾಲಿ.
ಇಲ್ಲಿ ಸಾಮಾನ್ಯವಾಗಿ ಚಿತ್ರವೊಂದಕ್ಕೆ ಇರುವ ಎಲ್ಲಾ ಅಂಶಗಳೂ ಇವೆ. ಆದರೆ ಹಳೆ ಮದ್ಯ ಹೊಸ ಬಾಟಲಿ ಅನ್ನುವ ಹಾಗಿದೆ. ಚಿತ್ರಕಥೆಯಲ್ಲೂ ಲವಲವಿಕೆ ಇಲ್ಲ. ಉಲ್ಲಾಸ ಮೂಡಿಸುವ ಸನ್ನಿವೇಶ ಇಲ್ಲ. ಅಭಿನಯದಲ್ಲೂ ಅಂಥ ಹೇಳಿಕೊಳ್ಳುವ ಉತ್ತೇಜನ ಇಲ್ಲ. ನಿರ್ದೇಶನ ಓಕೆ. ಒಟ್ಟಾರೆ ಇಲ್ಲಿ ಪ್ರೀತಿಯ ಜತೆ ಕೌಟುಂಬಿಕ ಕಿತ್ತಾಟ, ಎರಡು ಕುಟುಂಬದ ನಡುವಿನ ಸಂಘರ್ಷ ಚಿತ್ರದಲ್ಲಿ ಕಾಣ ಸಿಗುತ್ತದೆ.
ನಿರ್ದೇಶಕ ದೀಪಕ್ ತಮಗಿರುವ ಮಿತಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರಕಥೆಗಿರುವ ಬಲಕ್ಕೆ ಇನ್ನೂ ಹೆಚ್ಚಿನದನ್ನು ಮಾಡಲು ಸಾಧ್ಯವೇ ಇಲ್ಲ. ನಟ ಗೌರಿ ಶಂಕರ್ ತಮ್ಮ ಪಾತ್ರಕ್ಕೆ ಸಾಕಷ್ಟು ನ್ಯಾಯ ಒದಗಿಸಿದ್ದಾರೆ. ಲವಲವಿಕೆಯಿಂದ ಅಭಿನಯಿಸಿದ್ದಾರೆ. ನಾಯಕಿ ಉದಯತಾರಾ ಸಹ ಪರವಾಗಿಲ್ಲ.
ರಂಗಾಯಣ ರಘು ಬಹಳ ದಿನಗಳ ನಂತರ ಒಂದು ಕೆಟ್ಟ ಪಾತ್ರ ಮಾಡಿದ್ದಾರೆ. ರವಿಕಾಳೆ, ಮುನಿ, ಉಮಾಶ್ರೀ ತಮ್ಮ ನೈಜ ಅಭಿನಯ ಮೆರೆಯುವಲ್ಲಿ ಸಫಲರಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬುಲೆಟ್ ಪ್ರಕಾಶ್ ಸಹ ಹಾಸ್ಯ ಮರೆತವರಂತೆ ಅಭಿನಯಿಸಿದ್ದಾರೆ. ಇಷ್ಟು ಸಾಕು. ಬೇಕಾದಷ್ಟು ಸಮಯ ಇದೆ ಎಂದಾದಲ್ಲಿ ಚಿತ್ರ ನೋಡಿ ಬರಬಹುದು.