ಬಹು ನಿರೀಕ್ಷೆಯ ಹಾಸ್ಯ ಚಿತ್ರವೊಂದು ಹಾಸ್ಯಾಸ್ಪದವಾಗಿದೆ. ಹೌದು. ನಂಜನಗೂಡು ನಂಜುಂಡ ಚಿತ್ರದ ಬಗ್ಗೆ ಇನ್ನೇನೂ ಹೇಳಲು ಸಾಧ್ಯವಿಲ್ಲ. ರವಿಶಂಕರ್, ಹಂಸಿಣಿ, ಜೈಜಗದೀಶ್ ಮತ್ತಿತರರು ಅಭಿನಯಿಸಿರುವ ಈ ಚಿತ್ರ ನಿರೀಕ್ಷೆಯ ಕಾಲು ಭಾಗ ಸಹ ತಲುಪಿಲ್ಲ. ಕೇವಲ ಒನ್ ಮ್ಯಾನ್ ಆರ್ಮಿಯಂತೆ ನಟಿಸಿದ್ದಾರೆ ರವಿಶಂಕರ್.
ಸಿಲ್ಲಿ ಲಲ್ಲಿ ಧಾರವಾಹಿ ನಂತರ ಪಯಣ ಚಿತ್ರ ಮಾಡಿ ಜನರನ್ನು ನಗಿಸಿದ್ದ ಇವರು ಇಲ್ಲಿ ಇನ್ನಷ್ಟು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಅವರಿಗೆಯ ಯಾರೂ ಜತೆಯಾಗಿ ಸಿಕ್ಕಿಲ್ಲ ಅಂದರೆ ತಪ್ಪಾಗದು.
ನಿರ್ದೇಶಕ ಶ್ರೀನಿವಾಸ್ ಪ್ರಸಾದ್ ಸಪ್ಪೆ ಹೊಡೆಯುತ್ತಾರೆ. ರವಿಶಂಕರ್ ಸ್ವಂತ ಅಭಿನಯ ಬಿಟ್ಟರೆ ಉಳಿದವರಿಂದ ಕಲೆಯನ್ನು ಹೊರತರಿಸುವಲ್ಲಿ ವಿಫಲರಾಗಿದ್ದಾರೆ. ರವಿಶಂಕರ್ ತಮ್ಮದೇ ಆದ ಅಭಿನಯ ಮೆರೆದಿದ್ದು, ಇವರಿಗೆ ಉತ್ತಮ ನಿರ್ದೇಶಕ ಲಭಿಸಿದ್ದರೆ ಇನ್ನಷ್ಟು ನೀರೀಕ್ಷಿಸಬಹುದು ಅನ್ನಿಸುವುದು ಸುಳ್ಳಲ್ಲ. ಸುಭಾಷ್ ಕೂರ್ಗ್ ಹಾಗೂ ವಿ.ಕೆ. ಜಿಂದಾಲ್ ಹೂಡಿದ ಹಣ ಹಿಂದಕ್ಕೆ ಬಂದರೆ ಅಷ್ಟೇ ಸಂತೋಷ ಅನ್ನುವಂತಿದೆ ಚಿತ್ರ. ನಟಿ ಹಂಸಿಣಿ ಕೇವಲ ನಗೆಗೆ ಸೀಮಿತವಾಗಿದ್ದಾರೆ. ಸುಂದರಿ ನಗಲು ಮಾತ್ರ ಸಾಧ್ಯ ಅನ್ನುವ ಗಾದೆ ಇವರನ್ನು ನೋಡಿಯೂ ಹುಟ್ಟಿಕೊಳ್ಳಬಹುದು.
ಉಳಿದಂತೆ ಕೆ.ವಿ. ರವಿಚಂದ್ರ ಸಂಗೀತ ಅಷ್ಟೇನು ಚೆನ್ನಾಗಿಲ್ಲ. ಛಾಯಾಗ್ರಹಣವೂ ಅಷ್ಟಕ್ಕಷ್ಟೆ. ಸಂಕಲನ, ಸಂಭಾಷಣೆ ಬಗ್ಗೆ ಕೇಳುವುದೇ ಬೇಡ. ಒಟ್ಟಾರೆ ಚಿತ್ರ ಸಾಧಾರಣ ಅನ್ನುವಂತಿದೆ. ಒಂದು ರಿಮೇಕ್ ಚಿತ್ರ ಈ ರೀತಿ ವಿಫಲವಾಗಿದೆ. ಒಟ್ಟಾರೆ ಹಳಸಲು ಕಥೆ, ಬೋರೆನಿಸುವ ಸನ್ನಿವೇಶ ಜನರನ್ನು ರೊಚ್ಚಿಗೆಬ್ಬಿಸಿದರೂ ತಪ್ಪಿಲ್ಲ. ಚಿತ್ರವನ್ನು ರವಿಶಂಕರ್ ಅಭಿನಯಕ್ಕಾಗಿ ನೋಡಬಹುದು. ಇಲ್ಲಾಂದ್ರೆ ಧಾರಾಳವಾಗಿ ಬಿಡಲೂಬಹುದು.