ಹೊಡಿ, ಬಡಿ, ಕಡಿ ಪ್ರಿಯರಿಗೆ ಅಚ್ಚುಮೆಚ್ಚಿನ ಚಿತ್ರವೊಂದು ತೆರೆ ಕಂಡಿದೆ. ಅದಕ್ಕೆ 'ಡೆಡ್ಲಿ-2' ಎಂದು ಹೆಸರಿಡಲಾಗಿದೆ. ಮಚ್ಚು ಹಿಡಿದಿಲ್ಲ, ರಕ್ತ ಹರಿಸಿಲ್ಲ ಎಂಬೆಲ್ಲಾ ಹೇಳಿಕೆಯೊಂದಿಗೆ ತೆರೆಕಂಡ ಚಿತ್ರದ ತುಂಬಾ ಕಾಣಿಸುವುದು ರಕ್ತದ ಓಕಳಿ, ಮಚ್ಚು, ಲಾಂಗ್‌ಗಳ ವೈಭವೀಕರಣ. ಒಂದು ಫೈಟ್ ಮುಗಿಸಿ ವಿರಮಿಸಿಕೊಳ್ಳಲು ಸಹ ಪುರುಸೊತ್ತಿಲ್ಲದಂತೆ ಹೊಡೆದಾಡುತ್ತಲೇ ಇರುವ ಸ್ಥಿತಿ ಆದಿತ್ಯ ಅವರದ್ದು. ನಿಜಕ್ಕೂ ಒಂದು ವರ್ಗದ ಪ್ರೇಕ್ಷಕರನ್ನು ಮಾತ್ರ ಮೆಚ್ಚಿಸುವ ಚಿತ್ರ ಇದು ಎನ್ನುವಲ್ಲಿ ಸಂಶಯವೇ ಇಲ್ಲ.
ಇಷ್ಟಪಡುವ ವರ್ಗದವರನ್ನು ಉದ್ದೇಶವಾಗಿಟ್ಟುಕೊಂಡು ಹೇಳುವುದಾದರೆ ನಿರ್ದೇಶಕ ರವಿ ಶ್ರೀವತ್ಸ ಅವರ ಪ್ರಯತ್ನ ಉತ್ತಮವಾಗಿದೆ. ಚಿತ್ರಕಥೆಯ ನಿರೂಪಣೆಯಲ್ಲಿ ಚುರುಕುತನವಿದೆ. ಕ್ಯಾಮರಾ ಕೈಚಳಕದ ಬಗ್ಗೆ ಸಂಶಯಪಡುವ ಅಗತ್ಯ ಇಲ್ಲ. ಇವೆರಡು ಅಂಶ ಬಿಟ್ಟರೆ ಬೇರೆ ಪ್ಲಸ್ ಪಾಯಿಂಟ್ ಸಿಗುವುದಿಲ್ಲ.
ವಿವಿಧತೆಯಲ್ಲಿ ಏಕತೆ ಅನ್ನುವ ರೀತಿ ಆದಿತ್ಯ ಪಾತ್ರ ಹೆಣೆದಿದ್ದು ಚಿತ್ರದ ಇನ್ನೊಂದು ವಿಶೇಷ. ನಾನಾ ವಿಧದ ಹಾಗೂ ಆಯಾಮದ ಪಾತ್ರ ಆದಿತ್ಯ ಅವರದ್ದು. ಇಂಥದ್ದೊಂದು ಅವಕಾಶ ಎಲ್ಲಾ ನಟರಿಗೂ ಸಿಗುವುದಿಲ್ಲ. ಸಿಕ್ಕ ನಟರು ಅದನ್ನು ಬಳಸಿಕೊಳ್ಳುವುದಿಲ್ಲ. ಆದರೆ ಆದಿತ್ಯ ಇದನ್ನು ಸಕಾರಾತ್ಮಕವಾಗಿ ಬಳಸಿಕೊಂಡಿದ್ದಾರೆ. ಅದು ಜನರಿಗೂ ಇಷ್ಟವಾಗುತ್ತದೆ.
ಹತ್ತು ಹಲವು ಕೋನಗಳಲ್ಲಿ ಕ್ಯಾಮರಾ ಇಟ್ಟು ವಿಭಿನ್ನ ಛಾಯಾಗ್ರಹಣಕ್ಕೆ ಒತ್ತು ನೀಡಿರುವುದು ಚಿತ್ರವನ್ನು ನೋಡಿಸಿಕೊಂಡು ಹೋಗಲು ಸಹಕರಿಸುತ್ತದೆ. ಈ ಹಿಂದೆ ಇದ್ದ ಎಲ್ಲಾ ಮಾದರಿಯ ಕ್ಯಾಮರಾ ಕೈಚಳಕ ಮರೆತು ಈ ಚಿತ್ರ ನೋಡಬೇಕು ಹಾಗೆ ಅನ್ನಿಸುವ ರೀತಿ ಇಲ್ಲಿ ರವಿ ಛಾಯಾಗ್ರಾಹಕರಿಂದ ಕೆಲಸ ತೆಗೆಸಿದ್ದಾರೆ. ನಟಿ ಮೇಘನಾಗೆ ಇಲ್ಲಿ ಅವಕಾಶ ಕಡಿಮೆ. ಹೊಡೆದಾಟವನ್ನು ವೀಕ್ಷಿಸುತ್ತಾ ಇರುವುದರಲ್ಲೇ ಸಮಾಧಾನ ಕಂಡುಕೊಳ್ಳಬೇಕು. ಇನ್ನು ದೇವರಾಜ್ ಹಾಗೂ ರವಿ ಕಾಳೆ ಅವರ ಕಾಂಬಿನೇಷನ್ ಉತ್ತಮವಾಗಿದೆ. ಸುಹಾಸಿನಿ ಎಲ್ಲಕ್ಕೂ ಗ್ರೇಟ್. ಮತ್ತೊಮ್ಮೆ ಎಲ್ಲರ ಗಮನಕ್ಕೆ, ಇದು ಹೊಡೆದಾಟ, ಬಡಿದಾಟ, ರಕ್ತ ಹಾಗೂ ಮಚ್ಚುಗಳನ್ನು ಇಷ್ಟಪಡುವ ವರ್ಗದವರಿಗಾಗಿ ಮಾತ್ರ ಈ ಚಿತ್ರ ತಯಾರಿಸಲ್ಪಟ್ಟದ್ದು ಎದ್ದು ಕಾಣುತ್ತದೆ.