ಅಂತಾರಾಷ್ಟ್ರೀಯ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ 1995ರಲ್ಲೇ ಬಾಂಗ್ಲಾದೇಶದಲ್ಲಿ ತನ್ನ ಭಯೋತ್ಪಾದನೆ ಜಾಲವನ್ನು ಸ್ಥಾಪಿಸಿದ್ದು, 2000ದಿಂದೀಚೆಗೆ ತನ್ನ ಸಖ್ಯವನ್ನು ವಿಸ್ತರಿಸಿದ್ದಾನೆಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೂರ್ವ ಬಾಂಗ್ಲಾದೇಶದಲ್ಲಿ ಬ್ರಹ್ಮನ್‌ಬಾರಿಯ ಗ್ರಾಮದ ಬಳಿ ಅಡಗಿದ್ದ ದಾವೂದ್ ಇಬ್ರಾಹಿಂ ಸಂಗಡಿಗ ಅಬ್ದುರ್ ರೌಫ್ ದೌದ್ ಮರ್ಚೆಂಟ್ ಎಂಬವನನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಮೇಲಿನ ವಿಷಯ ಬೆಳಕಿಗೆ ಬಂದಿದೆ. ಭೂಗತದೊರೆ ದಾವೂದ್‌ಗೆ ನಿಷ್ಠವಾದ ಭಯೋತ್ಪಾದನೆ ತಂಡವನ್ನು ಹುಟ್ಟುಹಾಕುವ ಯೋಜನೆಯೊಂದಿಗೆ ಮರ್ಚೆಂಟ್ ರಾಷ್ಟ್ರಕ್ಕೆ ಕಾಲಿರಿಸಿದ್ದ.
ಬಾಲಿವುಡ್ ಸಂಗೀತ ನಿರ್ದೇಶಕ ಗುಲ್ಶನ್ ಕುಮಾರ್ ಹತ್ಯೆಯಲ್ಲಿ ತಪ್ಪಿತಸ್ಥನಾದ ಮರ್ಚೆಂಟ್ ಬಂಧನದಿಂದ ಅನೇಕ ಸುಳಿವುಗಳು ಬಾಂಗ್ಲಾ ಅಧಿಕಾರಿಗಳಿಗೆ ಸಿಕ್ಕಿದೆ. ದಾವೂದ್ ಭೂಗತಲೋಕದ ಜಾಲ ದಕ್ಷಿಣ ಏಷ್ಯಾದ್ಯಂತ ವಿಸ್ತರಿಸಿದೆಯೆಂಬ ನವದೆಹಲಿಯ ಆರೋಪವು ತನಿಖೆಯಿಂದ ದೃಢಪಟ್ಟಿರುವುದಾಗಿ ವಿಶ್ಲೇಷಕರು ಹೇಳಿದ್ದಾರೆ.
ದಾವೂದ್ ಮತ್ತು ಎರಡನೇ ಕಮಾಂಡ್ ಚೋಟಾ ಶಕೀಲ್ ಪಾಕಿಸ್ತಾನ ಮತ್ತು ದುಬೈನಿಂದ ಕಾರ್ಯಾಚರಿಸುತ್ತಿದ್ದಾರೆಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. ಸ್ಥಳೀಯ ಭೂಗತಜಾಲ ಮತ್ತು ಪ್ರಭಾವಿವ್ಯಕ್ತಿಗಳ ಜತೆ ಸಂಪರ್ಕ ಸಾಧಿಸಲು ಮರ್ಚೆಂಟ್ 1995ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದನೆಂದು ತನಿಖಾವಿಭಾಗದ ಅಧಿಕಾರಿಗಳು ಹೇಳಿದ್ದಾರೆ. |