ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಒಗ್ಗಟ್ಟಿಗೆ ಕಾರಣರಾದ ಗವರ್ನರ್‌ಗೆ ಸನ್ಮಾನಿಸ್ತೀವಿ: ಸಿಎಂ (Karnataka Crisis | Governer HR Bharadwaj | BJP Government | Yeddyurappa)
ರಾಷ್ಟ್ರಪತಿ ಆಳ್ವಿಕೆಯ ತೂಗುಗತ್ತಿಯನ್ನು ಪದೇ ಪದೇ ತಲೆಯ ಮೇಲೆ ನೇತು ಹಾಕುತ್ತಾ ಕರ್ನಾಟಕ ಸರಕಾರಕ್ಕೆ ಕಿರುಕುಳ ನೀಡುತ್ತಲೇ ಬಂದಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತುಂಬು ಮನಸ್ಸಿನಿಂದ ಕೃತಜ್ಞತೆ ಸಲ್ಲಿಸಿದ್ದಾರೆ. ಮಾತ್ರವೇ ಅಲ್ಲ, ಅವರಿಗೆ ವಿಧಾನಸೌಧದಲ್ಲಿ ಭರ್ಜರಿ ಸನ್ಮಾನವನ್ನೂ ಏರ್ಪಡಿಸುತ್ತಾರಂತೆ! ಅಚ್ಚರಿಯಾಗುತ್ತಿದೆಯೇ?

ಹೌದು, ಮುಖ್ಯಮಂತ್ರಿ ದೆಹಲಿಯಲ್ಲಿ ನಿನ್ನೆ ರಾತ್ರಿ ಇದನ್ನು ತಮ್ಮ ಬಾಯಿಯಿಂದಲೇ ಹೇಳಿದ್ದಾರೆ. ರಾಜ್ಯಪಾಲರು ಒಡೆದ ಮನೆಯಾಗಿದ್ದ ಬಿಜೆಪಿಯನ್ನು ಒಗ್ಗಟ್ಟಿನಿಂದ ಇರುವಂತೆ ಮಾಡಿದ್ದಾರೆ. ಅವರ ಕೃತ್ಯಗಳೆಲ್ಲವೂ ಬಿಜೆಪಿಯಲ್ಲಿ ಬಲ ತುಂಬುತ್ತಿದೆ, ಹೋರಾಟದ ಕಿಚ್ಚು ಹಚ್ಚುತ್ತಿದೆ. ಪರಿಸ್ಥಿತಿಯನ್ನು ಎದುರಿಸಲು, ಸರಕಾರವನ್ನು ರಕ್ಷಿಸಲು ಶಾಸಕರೆಲ್ಲರೂ ಒಗ್ಗೂಡಿಸುವ ನಿಟ್ಟಿನಲ್ಲಿ ಸಹಕರಿಸಿವೆ. ನಮ್ಮ ಪಕ್ಷದ ಒಗ್ಗಟ್ಟಿಗೆ ಕಾರಣವಾದ ಅವರಿಗೆ ನಾನು ಅಭಿನಂದನೆಗಳನ್ನು ಹೇಳಲು ಬಯಸುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿಯಲ್ಲಿ ಪುನಶ್ಚೇತನಕ್ಕೆ ಕಾರಣವಾಗಿರುವ ರಾಜ್ಯಪಾಲರಿಗೆ ವಿಧಾನ ಸಭೆಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭರ್ಜರಿ ಸನ್ಮಾನವನ್ನೂ ಏರ್ಪಡಿಸಲಾಗುತ್ತದೆ ಎಂದು ಕೂಡ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಕರ್ನಾಟಕದ ರಕ್ಷಣೆಗಾಗಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದೆಹಲಿಗೆ ಬಂದಿದ್ದೇನೆ ಎಂದು ಯಡಿಯೂರಪ್ಪ ಅವರು ಇದೇ ಸಂದರ್ಭದಲ್ಲಿ ಹೇಳಲು ಮರೆಯಲಿಲ್ಲ. ಇಂದು ಸಂಜೆ 121 ಬಿಜೆಪಿ ಶಾಸಕರೊಂದಿಗೆ ಮುಖ್ಯಮಂತ್ರಿಯವರು ರಾಷ್ಟ್ರಪತಿಯನ್ನು ಭೇಟಿಯಾಗಿ, ತಮ್ಮ ಬಲ ಪ್ರದರ್ಶನ ಮಾಡಿ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಒತ್ತಾಯಿಸಲಿದ್ದಾರೆ.

ಕಾಂಗ್ರೆಸ್ ನಾಯಕರಲ್ಲಿಯೂ ರಾಜ್ಯಪಾಲರ ಕ್ರಮಕ್ಕೆ ಅಸಮಾಧಾನ
ಈ ಮಧ್ಯೆ, ಕೆಲವು ಕಾಂಗ್ರೆಸಿಗರೂ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿದ್ದ ಭಾವನೆಯನ್ನೇ ಹೊಂದಿದ್ದಾರೆ. ರಾಜ್ಯಪಾಲರ ಈ ಕ್ರಮವು ಸಂವಿಧಾನಾತ್ಮಕವಾಗಿ ಸಾಧುವಾದುದಲ್ಲ. ಯಾವುದೇ ಗಂಭೀರ ಸಂಗತಿ ಇಲ್ಲದಿದ್ದ ಹೊರತಾಗಿಯೂ ಅನವಶ್ಯವಾಗಿ ಅವರು ವಿಧಾನಸಭೆ ಅಮಾನತಿನಲ್ಲಿಡುವ ಶಿಫಾರಸು ಮಾಡಿದ್ದಾರೆ. ಇದು ಮುಂದೆ ಬರಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಪರವಾಗಿ ಅನುಕಂಪದ ಅಲೆ ಹರಿಸಲು ಕಾರಣವಾಗುತ್ತದೆ ಎಂಬುದು ಅವರ ಆತಂಕ. ಇದು ಕಾಂಗ್ರೆಸ್‌ಗೆ ಖಂಡಿತವಾಗಿಯೂ ಚೇತರಿಸಿಕೊಳ್ಳಲು ಅಸಾಧ್ಯವಾದ ಹೊಡೆತ ನೀಡಬಹುದು ಎಂಬುದು ಅವರ ಚಿಂತೆಗೆ ಕಾರಣ.

ರಾಜ್ಯಪಾಲರಿಗೆ ಬಿಜೆಪಿಯಿಂದ ಹ್ಯಾಪಿ ಬರ್ತ್‌ಡೇ...
ಇದೇ ವೇಳೆ, ದೆಹಲಿಯಲ್ಲಿರುವ ಬಿಜೆಪಿ ಶಾಸಕರು ಮತ್ತು ಸಂಸದರು ರಾಜ್ಯಪಾಲರಿಗೆ 74ನೇ ವರ್ಷದ ಹುಟ್ಟು ಹಬ್ಬದ ಶುಭಾಶಯವನ್ನು ಒಬ್ಬೊಬ್ಬರಾಗಿಯೇ ಕೋರುತ್ತಿದ್ದಾರೆ. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಹಾಗೂ ಸಿ.ಟಿ.ರವಿ ಮುಂತಾದವರು ರಾಜ್ಯಪಾಲರಿಗೆ ಶುಭಾಶಯ ಕೋರಿದ್ದಾರೆ. ಸಿ.ಟಿ.ರವಿ ಅವರಂತೂ, "ರಾಜ್ಯಪಾಲರಿಗೆ ಸದ್ಬುದ್ಧಿಯನ್ನೂ ಆ ದೇವರು ಕರುಣಿಸಲಿ" ಎಂದು ತಮ್ಮ ಶುಭಾಶಯದಲ್ಲಿ ಸೇರಿಸಿದ್ದಾರೆ.
ಇವನ್ನೂ ಓದಿ