ನವೆಂಬರ್ ತಿಂಗಳ ಮೊದಲ ವಾರದಲ್ಲಿ ಪರಿಸರ ಸ್ನೇಹಿ ಗ್ರೀನ್ ಆಟೋ ನಗರದಲ್ಲಿ ಕಡ್ಡಾಯ. ಆಟೋ ಚಾಲಕರ ಭಾರೀ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಗ್ರೀನ್ ಆಟೋಗಳನ್ನು ಕಡ್ಡಾಯಗೊಳಿಸಲು ತೀರ್ಮಾನಿಸಿದೆ.
ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಚೆನ್ನಮ್ಮ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಶೋಕ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್ ಮೊದಲ ವಾರ ಪರಿಸರ ಸ್ನೇಹಿ ಗ್ರೀನ್ ಆಟೋ ಕಡ್ಡಾಯಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.
ನಗರದಲ್ಲಿ ಇತ್ತೀಚೆಗೆ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ನಗರವನ್ನು ವಾಯು ಮಾಲಿನ್ಯದಿಂದ ಮುಕ್ತಿಗೊಳಿಸಿ ಹಸಿರು ನಗರವನ್ನಾಗಿಸಲು ಪರಿಸರಕ್ಕೆ ಪೂರಕವಾದ ಪರಿಸರ ಸ್ನೇಹಿ ಗ್ರೀನ್ ಆಟೋಗಳನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.
ನೂತನವಾಗಿ ರಸ್ತೆಗಿಳಿಯಲಿರುವ ಗ್ರೀನ್ ಆಟೋದಲ್ಲಿ ಗ್ಯಾಸ್ ಸಿಲಿಂಡರ್ ಅಳವಡಿಸಿಕೊಳ್ಳುವುದು, ಜಿಪಿಎಸ್ ಸಿಸ್ಟಮ್ ಕಡ್ಡಾಯ, ಸಮವಸ್ತ್ರ ಧರಿಸುವುದು, ಡಿಜಿಟಲ್ ಮೀಟರ್ ಮತ್ತು ಚಾಲನಾ ಪರವಾನಿಗೆ ಪತ್ರ ಕಡ್ಡಾಯವಾಗಿ ಹೊಂದಿರಬೇಕು. ಒಂದು ವೇಳೆ ಈ ನಿಯಮಗಳನ್ನು ಯಾವ ಚಾಲಕರು ಅನುಷ್ಠಾನಗೊಳಿಸುವುದಿಲ್ಲವೋ ಅಂತಹ ಆಟೋಗಳನ್ನು ರಸ್ತೆಗಿಳಿಯಲು ಬಿಡುವುದಿಲ್ಲ ಎಂದು ಸಚಿವರು ಎಚ್ಚರಿಸಿದರು.