ಬಿಜೆಪಿಯಲ್ಲಿನ ಭಿನ್ನಮತಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದು ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಆರೋಪಿಸಿದ್ದಾರೆ.
ಸಚಿವ ಶ್ರೀರಾಮುಲು ನಿವಾಸಕ್ಕೆ ಮಂಗಳವಾರ ಸಭೆ ನಡೆಯುತ್ತಿದ್ದ ವೇಳೆ ದಿಢೀರ್ ಭೇಟಿ ನೀಡಿದ ನಂತರ ಯತ್ನಾಳ್ ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ, ಉತ್ತರ ಕರ್ನಾಟಕದ ನಿರ್ಲಕ್ಷ್ಯದ ಕುರಿತು ಕಿಡಿಕಾರಿದರು.
ಈ ನಿಟ್ಟಿನಲ್ಲಿ ಬಿಜೆಪಿಯಲ್ಲಿನ ಬಂಡಾಯ ಸ್ಫೋಟಗೊಂಡಿರುವುದಾಗಿ ಹೇಳಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವೆ ಶೋಭಾ ಕರಂದ್ಲಾಜೆಯವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಇದೀಗ ಸರ್ವಾಧಿಕಾರಿಗಳು ಪಕ್ಷವನ್ನು ತ್ಯಜಿಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷಕ್ಕೆ ನೂತನ ಸಾರಥ್ಯಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಈಗ ಚರ್ಚೆ ನಡೆಯುತ್ತಿದ್ದು, ಜಗದೀಶ್ ಶೆಟ್ಟರ್ ಅವರನ್ನು ಮುಂದಿನ ಸಿಎಂ ಆಗಿ ನೇಮಕ ಮಾಡುವ ಕುರಿತು ಚಿಂತಿಸಲಾಗಿದೆ. ಇದಕ್ಕೆ ಶೆಟ್ಟರ್ ಕೂಡ ಸಿದ್ದವಾಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಿನ್ನಾಭಿಪ್ರಾಯವೇ ಇಲ್ಲ: ಕಳೆದ ಸೋಮವಾರದಿಂದ ರಾಜ್ಯರಾಜಕಾರಣದಲ್ಲಿ ಬಳ್ಳಾರಿಯ ಗಣಿಧಣಿಗಳು ಮುಖ್ಯಮಂತ್ರಿಗಳ ಧೋರಣೆ ವಿರುದ್ಧ ಸಭೆ ನಡೆಸಿದ್ದರು. ಮಂಗಳವಾರವೂ ಕೂಡ ನಗರದಲ್ಲಿ ಒಂದೆಡೆ ಸಿಎಂ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಆಪ್ತ ಶಾಸಕ, ಸಚಿವರೊಂದಿಗೆ ಸಭೆ ನಡೆಸಿದರು. ಮತ್ತೊಂದೆಡೆ ಸಚಿವ ಶ್ರೀರಾಮುಲು ನಿವಾಸದಲ್ಲಿಯೂ ರೆಡ್ಡಿ ಬೆಂಬಲಿಗರ ಸಭೆ ನಡೆದಿದ್ದು, ಶಾಸಕ ರೇಣುಕಾಚಾರ್ಯ 8ಜನರ ಶಾಸಕರ ಗುಂಪೊಂದು ಬಿರುಸಿನ ಮಾತುಕತೆ ನಡೆಸಿತ್ತು.
ಆದರೆ ಇಷ್ಟೆಲ್ಲಾ ನಡೆದರೂ ಕೂಡ ಸಭೆಯ ನಂತರ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಗಣಿಧಣಿಗಳೊಂದಿಗೆ ಅಸಮಧಾನ ಇದೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು. ಆದರೆ ಮಾಧ್ಯಮಗಳಲ್ಲಿನ ವರದಿಯನ್ನು ಸಂಪೂರ್ಣವಾಗಿ ಅಲ್ಲಗಳೆಯಲಾರೆ. ಏನೇ ವೈಮನಸ್ಸಿದ್ದರೂ ಅದನ್ನು ಚರ್ಚಿಸಿ ಬಗೆಹರಿಸುವುದಾಗಿ ಹೇಳಿದರು.
ಇತ್ತ ಶಾಸಕ ರೇಣುಕಾಚಾರ್ಯ ಸಹ ತಮ್ಮದು ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಲು ಒಂದೆಡೆ ಸೇರಿದ್ದೇವೆ ವಿನಃ ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ ಎಂದರು.
ಸಂಧಾನ ವಿಫಲ: ಸಚಿವ ಶ್ರೀರಾಮುಲು ನಿವಾಸದಲ್ಲಿ ಸಭೆ ಮುಗಿದ ಕೂಡಲೇ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಸಂಧಾನಕಾರರಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ತೆರಳಿದ್ದರು. ಆದರೆ ಸಂಧಾನಕ್ಕೆ ಯತ್ನಿಸಿದರೂ ಕೂಡ ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ವಾಪಸ್ಸಾಗಿದ್ದರು.