ನಂದಿಗುಡಿ ವೃಷಭಪುರಿ ಸಂಸ್ಥಾನದ ನಾಪತ್ತೆಯಾಗಿದ್ದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಸೊರಬ ತಾಲೂಕಿನ ಬಾಡದ ಬೈಲು ಎಂಬಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದು, ನೊಳಂಬ ಸಮಾಜದ ನೂತನ ಪೀಠಾಧಿಪತಿ ಆಯ್ಕೆ ಕುತೂಹಲ ಮೂಡಿಸಿದೆ.
ಭಾನುವಾರ ಮಠದಲ್ಲಿ ಪೀಠಾಧಿಪತಿ ಆಯ್ಕೆ ಸಂಬಂಧ ನಿರ್ಣಾಯಕ ಸಭೆ ನಡೆದಿತ್ತು. ಭಕ್ತರ ಎರಡು ಬಣಗಳ ನಡುವೆ ವಾಗ್ವಾದ ನಡೆದಿತ್ತು. ಈ ಮಧ್ಯೆ ಕಾಣೆಯಾಗಿದ್ದ ನಂದೀಶ್ವರ ಶ್ರೀಗಳನ್ನು ಹುಡುಕಿಕೊಡುವಂತೆ ಭಕ್ತರೊಬ್ಬರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು, ಸ್ವಾಮೀಜಿ ನಾಪತ್ತೆ ಪ್ರಕರಣ ಭೇದಿಸುವಲ್ಲಿ ಕೊನೆಗೂ ಯಶಸ್ಸು ಕಂಡಿದ್ದಾರೆ.
ಮುಮ್ಮಡಿ ಬಸವರಾಜ ಸ್ವಾಮೀಜಿ ಅವರನ್ನು ಮೂರು ತಿಂಗಳೊಳಗೆ ನೂತನ ಪೀಠಾಧಿಪತಿ ಆಗಿ ನೇಮಕ ಮಾಡುವ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡಿತ್ತು. ಆದರೆ, ಈ ಹಿಂದಿನ ಪೀಠಾಧಿಪತಿಯಾಗಿದ್ದ ನಂದೀಶ್ವರ ಸ್ವಾಮೀಜಿ ಪತ್ತೆಯಾಗದಿರುವುದು ಈಗ ಭಕ್ತ ಸಮೂಹದಲ್ಲಿ ತಳಮಳ ಸೃಷ್ಟಿಸಿದೆ.
ನಂದೀಶ್ವರ ಶ್ರೀಗಳು ಮೂರು ವರ್ಷಗಳ ಹಿಂದೆ ಮಠ ತೊರೆದಿದ್ದರು. ಮಾನಸಿಕ ವಿಶ್ರಾಂತಿ ಬಯಸಿ ನಿಗೂಢ ಸ್ಥಳಕ್ಕೆ ತೆರಳುತ್ತಿರುವುದಾಗಿ ಮಠದ ಆಪ್ತರಿಗೆ ತಿಳಿಸಿದ್ದರು. ಪುನಃ ಮಠಕ್ಕೆ ವಾಪಸ್ ಬರುವುದಾಗಿ ಭರವಸೆ ಕೂಡ ನೀಡಿದ್ದರು. ಆದರೆ ಸ್ವಾಮೀಜಿ ಗೃಹಸ್ಥಾಶ್ರಮಕ್ಕೆ ಕಾಲಿಡುವ ಮೂಲಕ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.