ಲವ್ ಜಿಹಾದ್ ಹಿಂದೆ ಯಾವ ಸಂಘಟನೆ ಇದೆ, ಆ ಸಂಘಟನೆಗೆ ಎಲ್ಲಿಂದ ದುಡ್ಡು ಬರುತ್ತೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ 15ದಿನಗಳಲ್ಲಿ ವರದಿ ನೀಡುವಂತೆ ಸಿಐಡಿ ವಿಭಾಗದ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ತಿಳಿಸಿದ್ದಾರೆ.
ಕರ್ನಾಟಕ ಮತ್ತು ಕೇರಳ ಹೈಕೋರ್ಟ್‌ನಲ್ಲಿ ಉಲ್ಲೇಖಿತವಾದ ಲವ್ ಜಿಹಾದ್ ಹಿನ್ನೆಲೆ, ಯುವತಿಯರ ನಾಪತ್ತೆ, ಮತಾಂತರಕ್ಕೆ ಬಲವಂತ ಮಾಡಿರುವ ಘಟನೆಗಳ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಬೇಕೆಂದು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.
ಲವ್ ಜಿಹಾದ್ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗೃಹ ಕಾರ್ಯದರ್ಶಿ,ಪೊಲೀಸ್ ಮಹಾ ನಿರ್ದೇಶಕರು ಮತ್ತಿತರ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಲವ್ ಜಿಹಾದ್‌ಗೆ ಯಾರ ಪ್ರೋತ್ಸಾಹ ಇದೆ?ನಮ್ಮ ರಾಜ್ಯದ ಯಾವ, ಯಾವ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಕೇರಳದಲ್ಲಿ ಏನು ಪರಿಸ್ಥಿತಿ ಇದೆ. ಈ ಎಲ್ಲಾ ಅಂಶಗಳ ಬಗ್ಗೆ ತನಿಖೆ ಮಾಡಿ ಡಿಜಿಪಿಯವರು ವರದಿ ನೀಡಲಿದ್ದಾರೆ. ವರದಿ ನೀಡಿದ ನಂತರ ಮುಂದೇನು ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.