ಆಸ್ಟ್ರೇಲಿಯಾದಷ್ಟೇ ಪ್ರಭಾವಶಾಲಿಯಾದ ವ್ಯಾಸಂಗ ವ್ಯವಸ್ಥೆ ಭಾರತದಲ್ಲೇ ಇರುವ ಕಾರಣ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾಕ್ಕೆ ಹೋಗಬೇಕಾಗಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಸಲಹೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಮಾತನಾಡಿದ ಅವರು ಅನವಶ್ಯಕವಾಗಿ ಆಸ್ಟ್ರೇಲಿಯಾಕ್ಕೆ ತೆರಳಿ ಭಾರತೀಯ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿಕೊಳ್ಳಬೇಕಾಗಿಲ್ಲ ಎಂದರು. ಆಸ್ಟ್ರೇಲಿಯಾಕ್ಕೆ ತೆರಳುವ ವಿದ್ಯಾರ್ಥಿಗಳು ಅಲ್ಲೇ ನೆಲೆ ನಿಲ್ಲುವ ಉದ್ದೇಶ ಹೊಂದಿರುವುದು ಕಳವಳಕಾರಿ. ಪ್ರಸ್ತುತ 83ಸಾವಿರ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ಕಲಿಯುತ್ತಿದ್ದಾರೆ. ಅಲ್ಲಿಗೆ ಶಿಕ್ಷಣಕ್ಕಾಗಿ ಹೋಗುವುದಕ್ಕೆ ಉತ್ತೇಜನ ನೀಡಬಾರದು ಎಂದರು.
ತಾನು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿ ಸರ್ಕಾರದ ಜತೆ ಮಾತುಕತೆ ನಡೆಸಿದ್ದೇನೆ, ಈಗ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಈ ಹೇಳಿಕೆ ನೀಡಿರುವ ಬೆನ್ನಲ್ಲೇ ಭಾನುವಾರ ಮೆಲ್ಬೋರ್ನ್‌ನಲ್ಲಿ ಮತ್ತೆ ಭಾರತೀಯ ಸಿಖ್ ಸಮುದಾಯದ ವಿದ್ಯಾರ್ಥಿಯೊಬ್ಬನ ಮೇಲೆ ದಾಳಿ ನಡೆಸಿದ ಪ್ರಕರಣ ವರದಿಯಾಗಿದೆ.