ಆಳ್ವಾಸ್ ಪ್ರತಿಷ್ಠಾನದ ಹೆಮ್ಮೆಯ ಕೂಸಾದ 'ಆಳ್ವಾಸ್ ನುಡಿ ಸಿರಿಳ' ಸಾಂಸ್ಕೃತಿಕ ಹಬ್ಬವು ನವೆಂಬರ್ 6ರಿಂದ ಮೂರು ದಿನಗಳವರೆಗೆ ನಡೆಯಲಿದ್ದು, ಇದನ್ನು ಹಿರಿಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಉದ್ಘಾಟಿಸಲಿದ್ದಾರೆ.
ಖ್ಯಾತ ಸಾಹಿತಿ ಡಾ. ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿರುವ ಈ ಸಮ್ಮೇಳನದಲ್ಲಿ ಸಾಹಿತ್ಯಗೋಷ್ಠಿ ಅಲ್ಲದೇ, ನೃತ್ಯ, ಹಾಸ್ಯ, ನಾಟಕ, ಕವಿಗೋಷ್ಠಿ ಇವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ರತ್ನಾಕರವರ್ಣಿ ವೇದಿಕೆ, ಗಂಗೂಬಾಯಿ ಹಾನಗಲ್ ಸಭಾಂಗಣ, ಸುಂದರಿ ಆನಂದ ಆಳ್ವ ವೇದಿಕೆಗಳನ್ನು ಸಜ್ಜುಗೊಳಿಸಲಾಗಿದೆ.
ಕನ್ನಡ ಮನಸ್ಸು-ಸಮನ್ವಯದೆಡೆಗೆ ಎಂಬ ಪರಿಕಲ್ಪನೆಯೊಂದಿಗೆ ನಡೆಯಲಿರುವ ಈ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಿಗೆ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವಾ ತಿಳಿಸಿದ್ದಾರೆ.
ಮನಶಾಸ್ತ್ರಜ್ಞ ಡಾ. ಸಿ.ಆರ್.ಚಂದ್ರಶೇಖರ್, ಪ್ರೊ.ಕೆ.ಪಿ.ರಾವ್, ರಂಗಕರ್ಮಿ ಪ್ರಸನ್ನ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮೊದಲಾದವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದು. ಜಗದ್ಗುರು ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿಯವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.