ರೆಡ್ಡಿ ಸಹೋದರರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಒಂದೆಡೆ ಅಸಮಾಧಾನಕ್ಕೆ ತೇಪೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಸರ್ಕಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ನಿಭಾಯಿಸಲು ಮುಖ್ಯಮಂತ್ರಿಗಳು ಅನುಸರಿಸುವ ಕ್ರಮವನ್ನು ಆಧರಿಸಿ ಮುಂದಿನ ಕಾರ್ಯತಂತ್ರ ರೂಪಿಸಲು ಬಳ್ಳಾರಿಯ ಸಚಿವ ತ್ರಯರು ನಿರ್ಧರಿಸಿದ್ದಾರೆ.
ಈಗ ಉಂಟಾಗಿರುವ ಬಿಕ್ಕಟ್ಟು ಸುಲಭವಾಗಿ ಬಗೆ ಹರಿಯಲಾಗದ್ದು ಎಂದು ವ್ಯಾಖ್ಯಾನಿಸಿರುವ ಗಣಿ ರೆಡ್ಡಿಗಳ ಬೆಂಬಲಿತ ಶಾಸಕರು ಸಚಿವೆ ಶೋಭಾ ಕರಂದ್ಲಾಜೆಯವರಿಗೆ ನೀಡುವ ಪ್ರಾಮುಖ್ಯತೆಗೆ ಕಡಿವಾಣ ಹಾಕಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಬಿ.ಪಿ.ಬಳಿಗಾರ್ ಅವರ ವರ್ತನೆಯನ್ನೂ ಹದ್ದು ಬಸ್ತ್‌ನಲ್ಲಿಡಬೇಕೆಂಬುದು ನಮ್ಮ ಒತ್ತಾಯ ಎಂದು ಸಂದೇಶ ರವಾನಿಸಿದ್ದಾರೆ.
ಗಣಿ ರೆಡ್ಡಿಗಳ ಬೇಡಿಕೆಗಳನ್ನು ಮಾನ್ಯ ಮಾಡದಿದ್ದರೇ ಬೆಂಬಲಿತ ಶಾಸಕರು ಇನ್ನೆರಡು ಮೂರು ದಿನಗಳ ಒಳಗೆ ಸಭೆ ನಡೆಸಿ ಸ್ಪಷ್ಟ ಸಂದೇಶವನ್ನು ಮುಖ್ಯಮಂತ್ರಿಗಳಿಗೆ ರವಾನಿಸಲು ನಿರ್ಧರಿಸಿರುವುದಾಗಿ ರೆಡ್ಡಿ ಸಹೋದರರ ಆಪ್ತ ಮೂಲಗಳು ತಿಳಿಸಿವೆ.