ರಾಜ್ಯ ಬಿಜೆಪಿ ನಾಯಕರಲ್ಲಿನ ಭಿನ್ನಾಭಿಪ್ರಾಯಗಳು ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳ ಮೇಲೆ ಕರಿನೆರಳು ಬೀರದಂತೆ ಎಚ್ಚರ ವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಗಾಂಧಿನಗರ ಕ್ಷೇತ್ರದ ಪಕ್ಷದ ಕಾರ್ಯಕರ್ತರು ನೆರೆ ಸಂತ್ರಸ್ತರ ಸಲುವಾಗಿ ಸಂಗ್ರಹಿಸಿದ್ದ ದೇಣಿಗೆಯನ್ನು ಶನಿವಾರ ಪಕ್ಷದ ಕಚೇರಿಯಲ್ಲಿ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದ ನೆರೆಪೀಡಿತ ಪ್ರದೇಶಗಳ ಸಮೀಕ್ಷೆಗೆ ಆಗಮಿಸಿದ್ದ ಕೇಂದ್ರ ತಂಡವನ್ನು ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರು ಸೌಜನ್ಯಕ್ಕೂ ಭೇಟಿಯಾಗಿಲ್ಲ. ಪಕ್ಷದ ಮುಖಂಡರು ಒಳಜಗಳದಲ್ಲಿ ಮುಳುಗಿರುವುದೇ ಇದಕ್ಕೆ ಕಾರಣ ಎಂದು ಅವರು ದೂರಿದರು.
ಪ್ರವಾಹ ಪರಿಹಾರಕ್ಕೆ ಹೆಚ್ಚಿನ ನೆರವು ಕೋರುವ ಸಂಬಂಧ ಪ್ರಧಾನಿಯನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಭೇಟಿ ಮಾಡಲು ಕಾಂಗ್ರೆಸ್ ನಿಯೋಗ ದೆಹಲಿಗೆ ತರಳಲಿದೆ. ನಿಯೋಗದಲ್ಲಿ ಪಾಲ್ಗೊಳ್ಳುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಲ್ಲಿಯವರೆಗೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ಉತ್ತರಿಸಿದರು.