ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಸರಣಿ ಹಂತಕ ಮೋಹನ್ ಕುಮಾರ್ ಸ್ವತಃ ತಾನೇ ಇಲ್ಲಿನ ಸ್ಥಳೀಯ ಠಾಣೆಯ ಶೌಚಾಲಯದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಶುಕ್ರವಾರ ಸಂಜೆಯಿಂದಲೇ ಮೋಹನ್ ಕುಮಾರ್ ಅದೇಕೋ ತೀರ ಖಿನ್ನನಾದಂತಿದ್ದ ಎಂದು ಮೂಲಗಳು ತಿಳಿಸಿವೆ. ಬಂಟ್ವಾಳ ಪೊಲೀಸ್ ಠಾಣೆ ಲಾಕಪ್‌ನಲ್ಲಿದ್ದ ಮೋಹನ್‌ನನ್ನು ಶನಿವಾರ ಬೆಳಗಿನ ಜಾವ 5.30ರ ಸುಮಾರಿಗೆ ಬಹಿರ್ದೆಸೆಗೆಂದು ಶೌಚಾಲಯಕ್ಕೆ ಕರೆದೊಯ್ದು ಬಿಟ್ಟಿದ್ದರು. ಇತ್ತ ಪೊಲೀಸರು ಹೊರಗೆ ಕಾವಲು ಕಾಯುತ್ತಿದ್ದರೆ ಅತ್ತ ಶೌಚಾಲಯದೊಳಗೆ ಮೋಹನ ಗೋಡೆಗೆ ಅಳವಡಿಸಿರುವ ಟೈಲ್ಸ್‌ಗೆ ತನ್ನ ತಲೆಯನ್ನು ಹೊಡೆದುಕೊಳ್ಳುತ್ತಿದ್ದ.
ಸುಮಾರು ಹೊತ್ತಾದರೂ ಮೋಹನ ಹೊರಗೆ ಬಾರದಿದ್ದಾಗ ಸಂಶಯಗೊಂಡ ಪೊಲೀಸರು ಬಾಗಿಲು ತೆರೆದು ನೋಡಿದಾಗ ಆತನ ತಲೆಗೆ ಗಾಯವಾಗಿ ರಕ್ತ ಸುರಿಯುತ್ತಿದ್ದುದು ಕಂಡು ಬಂದಿದೆ. ತಕ್ಷಣ ಪೊಲೀಸರು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಸೂಚನೆಯ ಮೇರೆಗೆ 6.30ರ ಸುಮಾರಿಗೆ ಬಂಟ್ವಾಳ ಆಸ್ಪತ್ರೆಗೆ ಕರೆದೊಯ್ದಿದ್ದು, ಆತನ ತಲೆಯ ಗಾಯಗಳಿಗೆ ಚಿಕಿತ್ಸೆ ನೀಡಿ ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿದ ಪೊಲೀಸರು ಆತನನ್ನು ಐಜಿಪಿ ಎದುರು ಹಾಜರುಪಡಿಸಿ ನಿಟ್ಟುಸಿರು ಬಿಟ್ಟಿದ್ದಾರೆ.
ಬಂಧನವಾದಾಗಿನಿಂದ ಪೊಲೀಸರ ಎಲ್ಲ ಪ್ರಶ್ನೆಗಳಿಗೂ ಅಳುಕದೆ ಉತ್ತರಿಸಿ, ತನ್ನ ಪಾಪದ ಕೆಲಸಗಳ ಬಗ್ಗೆ ಸ್ವಲ್ಪವೂ ಮುಜುಗರ ಪಡೆದಿದ್ದ ಮೋಹನ ಕುಮಾರ ಮೊನ್ನೆಯಿಂದ ಅದೇಕೋ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರಲಿಲ್ಲ ಎಂಬುದು ಪೊಲೀಸರ ವಿವರಣೆ. ಬಹುಶಃ ತನ್ನ ದುಷ್ಕೃತ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪದೇ ಪದೇ ಉತ್ತರಿಸಿದ್ದು ತನ್ನನ್ನು ನೋಡಲೆಂದೇ ನೆರೆದಿದ್ದ ನೂರಾರು ಜನರು ತನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದು ಕೊನೆಗೂ ಈ ರಾಕ್ಷಸ ರೂಪಿಯಲ್ಲಿ ಪಶ್ಚಾತ್ತಾಪದ ಭಾವನೆ ಮೂಡಿಸಿದೆಯೇನೋ? ಎಂಬ ಮಾತನ್ನು ಸ್ಥಳೀಯರು ಆಡಿಕೊಳ್ಳುತ್ತಿದ್ದರು.