ಅನೇಕ ಕಾರಣಗಳಿಂದ ವಿವಾದದ ಕೇಂದ್ರಬಿಂದುವಾಗಿರುವ ರಂಗಾಯಣದ ನಿರ್ದೇಶಕಿಯ ಸ್ಥಾನಕ್ಕೆ ಖ್ಯಾತ ಕಲಾವಿದೆ ಹಾಗೂ ಗಾಯಕಿ ಬಿ.ಜಯಶ್ರೀಯವರು ರಾಜೀನಾಮೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ರಂಗಾಯಣಕ್ಕೆ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಅವರು ರಾಜೀನಾಮೆ ನೀಡಿದ್ದು ಏಕೆ ಎಂಬುದಾಗಲಿ ಅಥವಾ ಈ ಕುರಿತಾದ ಇನ್ನಾವುದೇ ವಿವರವಾದ ಮಾಹಿತಿಗಳಾಗಲೀ ಇನ್ನೂ ಲಭ್ಯವಾಗಿಲ್ಲ. ಸದ್ಯಕ್ಕೆ ಜಯಶ್ರೀಯವರು ತಮ್ಮ ರಾಜೀನಾಮೆಯನ್ನು ಕೊರಿಯರ್ ಮೂಲಕ ಸರ್ಕಾರಕ್ಕೆ ರವಾನಿಸಿದ್ದು, ಭಾನುವಾರ ಅದನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಸುದ್ದಿಮೂಲಗಳು ಹೇಳಿವೆ.
ರಂಗಾಯಣದ ನಿರ್ದೇಶಕಿಯಾಗಿ ಜಯಶ್ರೀಯವರು ನೇಮಕಗೊಂಡಿದ್ದು ಕಳೆದ ಅಗಸ್ಟ್ ತಿಂಗಳಿನಲ್ಲಿ. ಆದರೆ ಅಂದಿನಿಂದಲೂ ಒಂದಲ್ಲಾ ಒಂದು ವಿವಾದವು ರಂಗಾಯಣದ ಸುತ್ತ ಸುತ್ತಿಕೊಂಡೇ ಇತ್ತು. ಇದರಿಂದಾಗಿ ನಿರ್ದೇಶಕರು ಹಾಗೂ ಕಲಾವಿದರ ನಡುವೆ ಅಭಿಪ್ರಾಯಭೇದಗಳು ಉಂಟಾಗಿದ್ದವು.
ಆದರೆ, ಈ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಮೈಸೂರಿನ ಹವ್ಯಾಸಿ ಕಲಾವಿದರು ಬಹಳಷ್ಟು ಪ್ರಯತ್ನ ಮಾಡಿದರೂ ಸಹ ಅದು ಫಲಕಾರಿಯಾಗಲಿಲ್ಲವಾದ್ದರಿಂದ ಮತ್ತು ಜಯಶ್ರೀಯವರು ತಮ್ಮ ನಿರ್ಧಾರವನ್ನು ಸಡಿಲಿಸಲು ಸಿದ್ಧರಿರದಿದ್ದುದರಿಂದ ರಾಜೀನಾಮೆಗೆ ಮುಂದಾಗಿದ್ದಾರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.