'ನಾನು ಮುಖ್ಯಮಂತ್ರಿ,ನನ್ನ ಹುದ್ದೆಯ ಚೌಕಟ್ಟಿನಲ್ಲಿ ಅಧಿಕಾರ ಚಲಾಯಿಸಲು ನನಗೆ ಯಾವ ಅಡ್ಡಿಯೂ ಇಲ್ಲ'.ಇದು ಬಳ್ಳಾರಿ ರೆಡ್ಡಿಗಳ ಪಾಳೆಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ತಿರುಗೇಟು ಇದು.
ತಮ್ಮ ಖಾತೆ ಹಾಗೂ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ರೆಡ್ಡಿ ಸಹೋದರರು ಮಾಡಿದ್ದ ಆರೋಪಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಯಾಗಿ ನನ್ನ ಅಧಿಕಾರದ ಚೌಕಟ್ಟಿನಲ್ಲಿ ಬರುವ ವಿಚಾರಗಳ ಬಗ್ಗೆ ಅಧಿಕಾರ ಚಲಾಯಿಸುತ್ತಿದ್ದೇನೆ. ಇದರಿಂದಾಗಿ ಯಾವ ಸಮಸ್ಯೆ ಇಲ್ಲ ಎಂದು ತಿಳಿಸಿದರು. ರೆಡ್ಡಿ ಸಹೋದರರ ಭಿನ್ನಾಭಿಪ್ರಾಯ ಎಂಬುದು ಮಾಧ್ಯಮಗಳ ಸೃಷ್ಟಿ ಎಂದು ಪುನರುಚ್ಚರಿಸಿದ ಅವರು, ಒಂದು ವೇಳೆ ಇಂಥ ಯಾವುದೇ ಸಣ್ಣಪುಟ್ಟ ಸಮಸ್ಯೆಯಿದ್ದರೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.