ಸ್ವಾಭಿಮಾನವಿದ್ರೆ ಕರುಣಾಕರ ರೆಡ್ಡಿ ರಾಜೀನಾಮೆ ನೀಡ್ಲಿ: ಎಚ್‌ಡಿಕೆ
ಬೆಂಗಳೂರು, ಸೋಮವಾರ, 26 ಅಕ್ಟೋಬರ್ 2009( 13:44 IST )
ತಮ್ಮ ಗಮನಕ್ಕೆ ಬಾರದೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕಂದಾಯ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕರುಣಾಕರ ರೆಡ್ಡಿಯವರೇ ಆಪಾದಿಸಿದ್ದಾರೆ. ಅವರಿಗೆ ಸ್ವಾಭಿಮಾನವಿರುವುದೇ ಆದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡುತ್ತಿದ್ದ ಅವರು, ಅತಿವೃಷ್ಟಿ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಕಂದಾಯ ಸಚಿವರ ಜವಾಬ್ದಾರಿ ಸಹಜವಾಗಿಯೇ ಹೆಚ್ಚಿರುತ್ತದೆ. ಸಚಿವರ ಗಮನಕ್ಕೆ ಬಾರದೆಯೇ ಕೆಲಸಗಳು ನಡೆಯುತ್ತಿವೆ ಎಂದಾದಲ್ಲಿ ಅವರ ಕಾರ್ಯವೈಖರಿ ಏನೆಂದು ಗೊತ್ತಾಗುತ್ತದೆ. ಹಾಗಾಗಿ ರಾಜೀನಾಮೆ ನೀಡುವುದೇ ಸೂಕ್ತ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಬಿಬಿಎಂಪಿಯು ನಗರದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ 11 ಸಾವಿರ ಕೋಟಿ ರೂ. ಮೌಲ್ಯದ ಕಾಮಗಾರಿಗಳಲ್ಲಿ ಬೃಹತ್ ಗೋಲ್‌ಮಾಲ್ ನಡೆಸಲು ಬಿಬಿಎಂಪಿ ಮುಂದಾಗಿದೆ ಎಂದು ದೂರಿದ ಕುಮಾರಸ್ವಾಮಿ, ಸರ್ಕಾರಕ್ಕೆ ಜನತೆಯ ಮೇಲೆ ವಿಶ್ವಾಸವಿರುವುದೇ ಆದಲ್ಲಿ ಬಿಬಿಎಂಪಿ ಆಯುಕ್ತರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಗುಡುಗಿದರು.
ಒಂದು ವೇಳೆ ಸರ್ಕಾರ ಈ ಕುರಿತು ಗಮನ ಹರಿಸದಿದ್ದಲ್ಲಿ ತಾವೇ ಸ್ವತಃ ಲೋಕಾಯುಕ್ತರಾದ ಸಂತೋಷ್ ಹೆಗಡೆ ಹಾಗೂ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ರವರನ್ನು ಭೇಟಿ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ದೂರು ಸಲ್ಲಿಸುವುದಾಗಿ ತಿಳಿಸಿದ ಕುಮಾರಸ್ವಾಮಿ, ಜನಪ್ರತಿನಿಧಿಗಳು ಇಲ್ಲದ ಸಮಯದಲ್ಲಿ ಆತುರಾತುರವಾಗಿ ಕಾಮಗಾರಿಗಳನ್ನು ಕೈಗೊಳ್ಳುವುದರ ಹಿಂದಿರುವ ರಹಸ್ಯವಾದರೂ ಏನು ಎಂದು ಪ್ರಶ್ನಿಸಿದರು.