ರಂಗಾಯಣದ ನಿರ್ದೇಶಕಿಯಾಗಿ ನನ್ನನ್ನು ನೇಮಿಸಲ್ಪಟ್ಟಾಗ, ರಂಗಭೂಮಿಯಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಕನಸು ಕಂಡಿದ್ದೆ. ಆದರೆ, ಕೆಲ ಕಲಾವಿದರು ನನ್ನ ಕುರಿತು ಲಘುವಾಗಿ ಮಾತನಾಡಿ ಅವಹೇಳನ ಮಾಡಿದ್ದರಿಂದಾಗಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು ಎಂದು ಖ್ಯಾತ ಕಲಾವಿದೆ ಹಾಗೂ ಗಾಯಕಿ ಬಿ.ಜಯಶ್ರೀ ತಿಳಿಸಿದ್ದಾರೆ.
ಈಗಾಗಲೇ ಸರ್ಕಾರಕ್ಕೆ ರಾಜೀನಾಮೆ ಪತ್ರವನ್ನು ಕೊರಿಯರ್ ಮೂಲಕ ಕಳಿಸಿಕೊಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ವಿವರಗಳನ್ನು ನೀಡಲು ಇಲ್ಲಿನ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಂಗಾಯಣದ ನೌಕರರು, ಸಿಬ್ಬಂದಿ ಹಾಗೂ ಕಲಾವಿದರ ನಡುವೆ ಒಮ್ಮತವಿರಲಿಲ್ಲ. ಹೀಗಾಗಿ ಈ ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ಸ್ಪಷ್ಟಪಡಿಸಿದರು.
ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ರಂಗಭೂಮಿಯ-ರಂಗಕರ್ಮಿಗಳ ಅಭಿವೃದ್ದಿಗೆ ತಾವು ಷರತ್ತುಗಳನ್ನು ಇಟ್ಟಿದ್ದೇ ಹೊರತು ವೈಯಕ್ತಿಕ ಹಿತಾಸಕ್ತಿಗಲ್ಲ ಎಂದ ಜಯಶ್ರೀ, ಬೇರೆಯವರ ಹೇಳಿಕೆಗೆ ಅನುಗುಣವಾಗಿ ಬದುಕುವುದು ತಮಗೆ ಆಗದ ಮಾತು. ಆದ್ದರಿಂದ ಅವಮಾನವಾದ ಮೇಲೂ ಮುಂದುವರಿಯುವುದು ತರವಲ್ಲ ಎಂದು ಈ ನಿರ್ಧಾರಕ್ಕೆ ಬಂದೆ ಎಂದು ತಿಳಿಸಿದರು.
ರಂಗಾಯಣದ ಆವರಣದಲ್ಲಿ ನಡೆದ ತಿರುವಳ್ಳುವರ್ ಪ್ರತಿಮೆ ಅನಾವರಣ ಸಂಬಂಧದ ಪ್ರಕರಣದಲ್ಲಿ ಕಲಾವಿದರ ಷಟ್ಯಂತ್ರವಿದೆ ಎಂದು ತಾವು ಮಾಡಿದ ಆರೋಪ, ಕಲಾವಿದರ ಕುಚೇಷ್ಟೆ ಎಂಬುದಾಗಿ ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲ್ಪಟ್ಟಿತು. ಸದ್ಯಕ್ಕೆ ಸುಳ್ಳೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಸತ್ಯವು ಹೊರಬೀಳಲಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.