ಮನೆ ಊಟ ನೀಡುವಂತೆ ಕೋರಿ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ ತೆಲಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಆದರೆ, ವೈದ್ಯರ ಸಲಹೆಯಂತೆ ಆತನಿಗೆ ಪಥ್ಯದ ಆಹಾರವನ್ನು ನೀಡುವುದನ್ನು ಮುಂದುವರಿಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ನ್ಯಾಯಾಲಯ ಆದೇಶ ನೀಡಿದೆ.
ಮನೆ ಊಟ ಕೋರಿ ತೆಲಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾ.ಅರಳಿ ನಾಗರಾಜ್ ಅವರಿದ್ದ ಏಕ ಸದಸ್ಯ ಪೀಠ, ತೆಲಗಿ ಶಿಕ್ಷೆಗೆ ಒಳಗಾದ ಕೈದಿಯಾಗಿರುವುದರಿಂದ ಆತನಿಗೆ ಮನೆ ಊಟ ಅಥವಾ ಜೈಲಿನ ಹೊರಗಿಂದ ಊಟ ಪೂರೈಕೆ ಸಾಧ್ಯವಿಲ್ಲ ಎಂದು ಹೇಳಿದೆ.
ಜೈಲು ಅಧಿಕಾರಿಗಳು ತನ್ನನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. ಕಾಲ ಕಾಲಕ್ಕೆ ವೈದ್ಯರು ಹೇಳಿದ ಪಥ್ಯದ ಊಟ ಕೊಡುತ್ತಿದ್ದಾರೆ. ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಕೊಡಿಸುತ್ತಿದ್ದಾರೆ. ನಾನು ಈಗಲೂ ಜೀವಂತ ಇದ್ದೇನೆ ಎಂದಾದರೆ ಅದಕ್ಕೆ ಜೈಲು ಅಧಿಕಾರಿಗಳೇ ಕಾರಣ ಎಂದು ಸ್ವತಃ ತೆಲಗಿಯೇ ಹೈಕೋರ್ಟ್‌ಗೆ ತಿಳಿಸಿದ್ದಾನೆ.
ಇದರಿಂದಾಗಿ ಆಹಾರದ ವಿಚಾರದಲ್ಲಿ ಆತ ಜೈಲಿನಲ್ಲಿ ಯಾವುದೇ ತೊಂದರೆ ಅನುಭವಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಆತನಿಗೆ ಮನೆ ಊಟ ನೀಡುವ ಅನಿರ್ವಾಯತೆ ಇಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ತೆಲಗಿಗೆ ನೀಡುತ್ತಿರುವ ಊಟದ ವಿವರ: ಬೆಳಿಗ್ಗೆ 7ಕ್ಕೆ ಸಕ್ಕರೆ ಇಲ್ಲದ ಕಾಫಿ-ಚಹಾ ಅಥವಾ ಹಾಲು, ಬೆಳಿಗ್ಗೆ 8ರಿಂದ9-ಐದು ಪೀಸ್ ಬ್ರೆಡ್, ಒಂದು ಕಪ್ ಹಾಲು ಮತ್ತು 3 ಇಡ್ಲಿ.
ಬೆಳಿಗ್ಗೆ 11.30ಕ್ಕೆ ಒಂದು ಕಪ್ ಸಕ್ಕರೆ ಇಲ್ಲದ ಹಾಲು ಮತ್ತು ಮಾರಿ ಬಿಸ್ಕೆಟ್.
ಮಧ್ಯಾಹ್ನ 2ಗಂಟೆಗೆ ಮೂರು ಚಪಾತಿ, ಒಂದೂವರೆ ಕಪ್ ಅನ್ನ, ಒಂದು ಕಪ್ ಮೊಸರು.
ಸಂಜೆ5.30ಕ್ಕೆ ಬ್ರೆಡ್ ಮತ್ತು ಸಕ್ಕರೆ ಇಲ್ಲದ ಚಹಾ.
ರಾತ್ರಿ 9ಕ್ಕೆ ಮೂರು ಚಪಾತಿ, ಒಂದೂವರೆ ಕಪ್ ಅನ್ನ ಮತ್ತು ಒಂದು ಕಪ್ ಮೊಸರು, ಪ್ರತಿ ದಿನ ಒಂದು ಗ್ಲಾಸ್ ಮೊಸಂಬಿ ಅಥವಾ ಕಿತ್ತಳೆ ರಸ. ವಾರಕ್ಕೆ ಮೂರು ದಿನ ಚಿಕನ್, ಮಟನ್ ಅಥವಾ ಮೀನು.