ಭಿನ್ನಮತದಿಂದ ಅಸಮಧಾನಗೊಂಡಿರುವ ಬಳ್ಳಾರಿ ಗಣಿಧಣಿಗಳು ಯಡಿಯೂರಪ್ಪನವರು ಮಾತುಕತೆಗೆ ಕರೆದರೂ ತಾವು ಹೋಗುವುದಿಲ್ಲ ಎಂದು ಪಟ್ಟುಹಿಡಿದಿದ್ದು, ಏನೇ ಇದ್ದರೂ ನ.2ರ ನಂತರ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
ಏತನ್ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ದೂರವಿಟ್ಟು, ನೆರೆಯಲ್ಲಿ ನೊಂದವರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗೆ ಬುಧವಾರ ಚಾಲನೆ ನೀಡಲು ಬಳ್ಳಾರಿ ಸಚಿವರು ಮುಂದಾಗಿದ್ದಾರೆ. ಇದು ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಲಿದೆ.
ರಾಜಕೀಯ ಸಂಘರ್ಷ ತಪ್ಪಿಸಲು ಸಚಿವ ಬಸವರಾಜ ಬೊಮ್ಮಾಯಿ ಅವರು ಜನಾರ್ದನ ರೆಡ್ಡಿ ಅವರೊಂದಿಗೆ ನಡೆಸಿದ ಮಾತುಕತೆ ಫಲಕಾರಿಯಾಗಲಿಲ್ಲ. ಸಚಿವ ಅರವಿಂದ ಲಿಂಬಾವಳಿ ಅವರು ಸಚಿವ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಯತ್ನವೂ ವಿಫಲವಾಗಿದೆ.
ಆಡಳಿತಾರೂಢ ಬಿಜೆಪಿಯಲ್ಲಿನ ರಾಜಕೀಯ ವಿದ್ಯಮಾನ ಗೊಂದಲದ ಗೂಡಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಳ್ಳಾರಿ ಸಚಿವರ ಮಧ್ಯೆ ಉಂಟಾಗಿರುವ ರಾಜಕೀಯ ಸಮರ ಅಂತ್ಯಗೊಳಿಸಲು ಸಂಧಾನ ಸಭೆಗಳು ಆರಂಭವಾಗಿದೆ. ಮತ್ತೊಂದೆಡೆ ರಾಜ್ಯದ ವಿದ್ಯಮಾನಗಳ ಬಗ್ಗೆ ಆರ್‌ಎಸ್‌ಎಸ್ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿಯೂ ಮೂಲಗಳು ತಿಳಿಸಿವೆ.