ಲವ್ ಜಿಹಾದಿಗಳನ್ನು ಹಿಡಿದುಕೊಡಿ ಪಾಠ ಕಲಿಸ್ತೇವೆ: ತೊಗಾಡಿಯಾ
ಬೆಳಗಾವಿ, ಮಂಗಳವಾರ, 27 ಅಕ್ಟೋಬರ್ 2009( 16:00 IST )
PTI
ದೇಶದ ಯಾವುದೇ ಮೂಲೆಯಲ್ಲಿ ಶಾಲೆ, ಕಾಲೇಜಿನ ಸುತ್ತ 'ಲವ್ ಜಿಹಾದ್' ಎಂದು ಪೀಡಿಸುವವರು ಕಂಡುಬಂದರೆ ಅವರನ್ನು ಹಿಂದೂ ಕಾರ್ಯಕರ್ತರಿಗೆ ಹಿಡಿದುಕೊಡಿ, ತಕ್ಕ ಪಾಠ ಕಲಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಪ್ರವೀಣಭಾಯಿ ತೊಗಾಡಿಯಾ ಕರೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಸಮರಸತಾ ಭವನ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಖಂಡ ಭಾರತವನ್ನು ಹಿಂದೂ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿರ್ಮಿಸಲು ಸನ್ನದ್ಧರಾಗಬೇಕಾಗಿದೆ ಎಂದರು.
ಕರ್ನಾಟಕ, ಕೇರಳ ಸೇರಿದಂತೆ ದೇಶದ ಬಹುಪಾಲು ಕಡೆ ಈಗ ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಸೆಳೆಯಲಾಗುತ್ತಿದೆ. ಇಷ್ಟು ದಿನ ಕತ್ತಿ ಹಿಡಿದು ಹಿಂದೂ ಧರ್ಮದ ಮೇಲೆ ಅತಿಕ್ರಮಣ ಮಾಡಿದವರು ಈಗ ಇದೇ ಧರ್ಮದ ಯುವತಿಯರನ್ನು ಬುಟ್ಟಿಗೆ ಹಾಕಿಕೊಳ್ಳಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲವ್ ಜಿಹಾದ್ ವಿರುದ್ಧ ದೇಶಾದ್ಯಂತ ಜಾಗೃತಿ ಮೂಡಿಸಬೇಕಾಗಿದೆ. ಪ್ರತಿಯೊಬ್ಬ ಹಿಂದೂ ತಾನು ಬದುಕಿರುವವರೆಗೂ ಒಬ್ಬಳೇ ಒಬ್ಬ ಹಿಂದೂ ಯುವತಿಯನ್ನು ಲವ್ ಜಿಹಾದ್‌ಗೆ ಬಲಿಕೊಡಲು ಬಿಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.
ದೇಶದಲ್ಲಿ ಈಗ ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಗಾಗಿ ಹಲವಾರು ಹೋರಾಟಗಳು ನಡೆದೇ ಇವೆ. ಮುಂದೆ ಎಂದೂ ಹಿಂದೂಗಳು ನಿರ್ಭಯವಾಗಿ, ಸ್ವಚ್ಛಂದವಾಗಿ ಬದುಕಬೇಕಾದರೆ ಈ ದೇಶವನ್ನು ಹಿಂದೂ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿರ್ಮಿಸುವುದೊಂದೇ ಮಾರ್ಗ. ಇದು ಸಾಧ್ಯವೂ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.