ವಿಧಾನಪರಿಷತ್‌ನ 25ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಘೋಷಣೆಯಾಗಿದ್ದು, ಇದರಲ್ಲಿ ಬಿಜೆಪಿ 10, ಕಾಂಗ್ರೆಸ್ 10 ಹಾಗೂ ಜೆಡಿಎಸ್ ಐದು ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ ಹತ್ತು ಸ್ಥಾನಗಳಲ್ಲಿ ಬಿಜೆಪಿ ಗೆದ್ದರೂ 75ಸದಸ್ಯ ಬಲವುಳ್ಳ ಮೇಲ್ಮನೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಬಹುಮತ ಸಿಕ್ಕಿಲ್ಲ.
ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಅಖಾಡ ಇಳಿದಿತ್ತು. ಆ ನಿಟ್ಟಿನಲ್ಲಿ ಕಾಂಗ್ರೆಸ್ ಜೆಡಿಎಸ್ ಒಟ್ಟು 15ಸ್ಥಾನಗಳಲ್ಲಿ ಗೆಲುವಿನ ನಗು ಬೀರಿದೆ. ಬಿಜೆಪಿ 10ಸ್ಥಾನ ಗೆಲ್ಲುವ ಮೂಲಕ ಮೇಲ್ಮನೆಯಲ್ಲಿ ಬಿಜೆಪಿ ಬಲ 37ಕ್ಕೇರಿದೆ.
ಆದರೆ ಪ್ರಮುಖ ವಿರೋಧಪಕ್ಷವಾಗಿದ್ದ ಕಾಂಗ್ರೆಸ್‌ಗೆ ಮಾತ್ರ ಭಾರೀ ಹೊಡೆತ ಬಿದ್ದಂತಾಗಿದೆ. 10ಸ್ಥಾನಗಳಲ್ಲಿ ಜಯ ಸಾಧಿಸಿರುವ ಕಾಂಗ್ರೆಸ್, ಈ ಮೊದಲು ಮೇಲ್ಮನೆಯಲ್ಲಿ 19ಸ್ಥಾನ ಹೊಂದಿತ್ತು. ಅಲ್ಲದೇ, ಜೆಡಿಎಸ್ 5ಸ್ಥಾನ ತನ್ನ ಬಗಲಿಗೆ ಹಾಕಿಕೊಂಡು ಹೆಚ್ಚಿನ ಲಾಭ ಗಳಿಸಿದೆ.
25ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಈಗಾಗಲೇ ದಕ್ಷಿಣಕನ್ನಡ ಮತ್ತು ಉಡುಪಿ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆ ನಡೆದಿತ್ತು. ಆ ನಿಟ್ಟಿನಲ್ಲಿ ಡಿ.18ರಂದು 23ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
75ಸದಸ್ಯ ಬಲ ಹೊಂದಿರುವ ಮೇಲ್ಮನೆಯಲ್ಲಿ ಅಸೆಂಬ್ಲಿ ಮತ್ತು ಸ್ಥಳೀಯ ಸಂಸ್ಥೆಗಳಿಂದ ತಲಾ 25ಮಂದಿ ಆಯ್ಕೆಯಾಗುತ್ತಾರೆ. ಪದವೀಧರ ಕ್ಷೇತ್ರದಿಂದ 7 ಹಾಗೂ ಪದವಿಯೇತರ ಕ್ಷೇತ್ರದಿಂದ 11ಮಂದಿ ನೇಮಕಗೊಳ್ಳುತ್ತಾರೆ. ಇದರಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಶಾಸನಬದ್ದ ನಿಯಮಾವಳಿಯನ್ವಯ 3/1ಅಂಶ ಸದಸ್ಯರು ನಿವೃತ್ತಿಯಾಗುತ್ತಾರೆ. ಸೋಮವಾರದ ಫಲಿತಾಂಶದ ಬಳಿಕ 75ಸದಸ್ಯ ಬಲ ಹೊಂದಿದ್ದ ಮೇಲ್ಮನೆಯಲ್ಲಿ ಬಿಜೆಪಿ 37, ಕಾಂಗ್ರೆಸ್-20, ಜೆಡಿಎಸ್-07 ಸದಸ್ಯ ಬಲ ಹೊಂದಿದಂತಾಗಿದೆ.