ಸರ್ಕಾರದ ನಿರ್ಲಕ್ಷ್ಯ- ಜನಪ್ರತಿನಿಧಿಗಳಿಗೆ ಒದೆಯಿರಿ: ಎಚ್‌ಡಿಕೆ
ಬೆಂಗಳೂರು, ಶುಕ್ರವಾರ, 21 ಮೇ 2010( 13:30 IST )
ಅಭಿವೃದ್ದಿ, ನೆರೆ ಸಂತ್ರಸ್ತರಿಗೆ ಸಾವಿರಾರು ಮನೆಗಳನ್ನು ಕಟ್ಟಿಸಿರುವುದಾಗಿ ರಾಜ್ಯ ಸರ್ಕಾರ ಬೊಗಳೆ ಬಿಡುತ್ತಿರುವುದಾಗಿ ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆಡಳಿತಾರೂಢ ಜನಪ್ರತಿನಿಧಿಗಳಿಗೆ ಒದ್ದು ಬುದ್ದಿ ಕಲಿಸಲು ಆರಂಭಿಸಬೇಕಾಗಿದೆ ಎಂದು ಬಿಟ್ಟಿ ಸಲಹೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಮಾತಿನುದ್ದಕ್ಕೂ ವಾಗ್ದಾಳಿ ನಡೆಸಿದರು.
ಕಳೆದ ವರ್ಷದ ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ಭಾಗದ ಜನರು ತತ್ತರಿಸಿ ಹೋಗಿದ್ದರು. ಆದರೆ ರಾಜ್ಯ ಸರ್ಕಾರ ಈವರೆಗೂ ನೆರೆ ಸಂತ್ರಸ್ತರಿಗೆ ಸಮರ್ಪಕವಾಗಿ ಸೂರಿನ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ. ಆ ನಿಟ್ಟಿನಲ್ಲಿ ಸಂತ್ರಸ್ತರು ಮೃದು ಸ್ವಭಾವವನ್ನು ಕೈ ಬಿಡಬೇಕು ಎಂದಿರುವ ಅವರು,ಜನಪ್ರತಿನಿಧಿಗಳಿಗೆ ಒದ್ದು ಪ್ರತಿಭಟನೆ ವ್ಯಕ್ತಪಡಿಸಬೇಕೆಂದು ಕಿಡಿಕಾರಿದ್ದಾರೆ. ಅಲ್ಲದೇ ಸಚಿವರು, ಶಾಸಕರಿಗೆ ಮುತ್ತಿಗೆ ಹಾಕಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಸಾರ್ವಜನಿಕರಿಂದ ಸುಮಾರು 600ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದೆ ಎನ್ನಲಾಗಿದೆ. ಆದರೆ ಸರ್ಕಾರ ಮಾತ್ರ ಸಾರ್ವಜನಿಕರಿಂದ 2.5ಕೋಟಿ ರೂಪಾಯಿ ಸಂಗ್ರಹಿಸಿರುವುದಾಗಿ ತಿಳಿಸಿದೆ. ಈ ಅಂಶ ಮಾಹಿತಿ ಹಕ್ಕು ಕಾಯ್ದೆಯ ವಿವರದಿಂದ ಪಡೆಯಲಾಗಿದೆ ಎಂದರು.
ನೆರೆ ಸಂತ್ರಸ್ತರಿಗೆ ಸಾವಿರಾರು ಮನೆಗಳನ್ನು ಕಟ್ಟಿದ್ದು, ಶೀಘ್ರದಲ್ಲೇ ಅವರ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವುದಾಗಿ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು. ಪ್ರತಿಯೊಂದು ವಿಷಯದಲ್ಲೂ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಸಂತ್ರಸ್ತರ ವಿಷಯದಲ್ಲೂ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.