ಸಚಿವ ರೇಣುಕಾಚಾರ್ಯ ಅವರ ಪ್ರೇಮಾಯಣ, ಮಾಜಿ ಸಚಿವ ಹಾಲಪ್ಪ ಅವರ ಅತ್ಯಾಚಾರ ಪ್ರಕರಣ, ಶಾಸಕ ಸಂಪಂಗಿ ಲಂಚ ಪ್ರಕರಣದ ಜೊತೆಗೆ ಅಧಿಕಾರಕ್ಕಾಗಿ ಆಪರೇಷನ್ ಕಮಲ, ರೈತರ ಮೇಲೆ ಗುಂಡು ಇದೆಲ್ಲಾ ಬಿಜೆಪಿ ಸರ್ಕಾರ ಸಾಧನೆಗಳು-ಹೀಗೆಂದು ವ್ಯಂಗ್ಯವಾಡಿದವರು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಮ್ ಹೊತ್ತಿ ಉರಿಯುತ್ತಿರಬೇಕಾದರೆ ನೀರೋ ದೊರೆ ಪಿಟೀಲು ಬಾರಿಸುತ್ತಿದ್ದನಂತೆ. ರಾಜ್ಯದ ಜನತೆ ಸಂಕಷ್ಟದಲ್ಲಿ ಒದ್ದಾಡುತ್ತಿರುವಾಗ ಯಾವ ಪುರುಷಾರ್ಥಕ್ಕೆ ಬಿಜೆಪಿ ಸರ್ಕಾರ ಸಾಧನಾ ಸಮಾವೇಶ ನಡೆಸುತ್ತಿರುವುದು ಎಂದು ಪ್ರಶ್ನಿಸಿದ್ದಾರೆ.
15 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಜನರು ತತ್ತರಿಸುತ್ತಿದ್ದಾರೆ. ಅವರ ನೆರವಿಗೆ ಸರ್ಕಾರ ಧಾವಿಸಿಲ್ಲ. ಅಲ್ಲದೆ, ಅವರಿಗೆ ಸೂಕ್ತ ಪರಿಹಾರ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದ ಅವರು, ರೈತರು ಭತ್ತಕ್ಕೆ ಬೆಂಬಲ ಬೆಲೆ ಕೊಡಬೇಕೆಂದು ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಕಣ್ಣೀರು ಒರೆಸಲು ಮುಂದಾಗಿಲ್ಲ ಎಂದುಆರೋಪಿಸಿದ್ದಾರೆ.
ಬಂಡವಾಳ ಹೂಡಿಕೆ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಂಡವಾಳ ಹೂಡಿಕೆ ಸಮಾವೇಶ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಸಮಾವೇಶದ ಹೆಸರಿನಲ್ಲಿ ಮಾಧ್ಯಮಗಳಿಗೆ ಮಿತಿಮೀರಿ ಜಾಹೀರಾತು ನೀಡಿ ಜನರ ತೆರಿಗೆಯನ್ನು ಪೋಲು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.