ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವರ ಕಿಸ್ಸಿಂಗ್,ಅತ್ಯಾಚಾರ ಪ್ರಕರಣ ಒಂದೊಂದೇ ಬಯಲಾಗುತ್ತಿದ್ದಂತೆಯೇ, ದಾಂಡೇಲಿಯ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರತಾಪ್ ಸಿಂಗ್ (32) ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇತ್ತೀಚೆಗಷ್ಟೇ ಆಡಳಿತಾರೂಢ ಬಿಜೆಪಿಯ ಸಚಿವ ಹರತಾಳು ಹಾಲಪ್ಪ ಅವರ ಕಾಮ ಪುರಾಣ ಹೊರ ಬಿದ್ದ ನಂತರ, ಈಗ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಸಿಂಗ್‌ನನ್ನು ಕಾರವಾರ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಹಾಲಪ್ಪ ಕೂಡ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನು ಎದುರಿಸುತ್ತಿದ್ದಾರೆ!
ಹಳೆ ದಾಂಡೇಲಿಯ ವಿವಾಹಿತ ಮಹಿಳೆಯೋರ್ವಳು ಪ್ರತಾಪ್ ಸಿಂಗ್ ತನ್ನನ್ನು ಬಲಾತ್ಕಾರ ಮಾಡಿ ಅದರ ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸಿ ಮಾರಾಟ ಮಾಡಿದ್ದಾನೆ ಎಂದು ಮೇ 13ರಂದು ದಾಂಡೇಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ತಲೆ ಮರೆಸಿಕೊಂಡಿದ್ದ ಆರೋಪಿ ಪ್ರತಾಪ್ ಸಿಂಗ್ ಬಂಧನಕ್ಕೆ ವ್ಯಾಪಕ ಬಲೆ ಬೀಸಲಾಗಿತ್ತು. ಆರೋಪಿ ಬೆಳಗಾವಿಯ ನಿಪ್ಪಾಣಿ ನಗರದಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು. ಅಲ್ಲಿಂದ ಆತನನ್ನು ಕಾರವಾರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತಾ ತಿಳಿಸಿದ್ದಾರೆ.
ಸ್ನೇಹಿತನಿಗೆ ದ್ರೋಹ ಎಸಗಿದ ಕಾಮಿ: ಅತ್ಯಾಚಾರಕ್ಕೊಳಗಾದ ಮಹಿಳೆಯ ಪತಿ ಮಧ್ಯ ಏಷ್ಯಾದಲ್ಲಿ ಉದ್ಯೋಗಿಯಾಗಿದ್ದಾರೆ. ಅವರು ಊರಲ್ಲಿ ಕಟ್ಟಿಸುತ್ತಿರುವ ಮನೆಯ ಉಸ್ತುವಾರಿಯನ್ನು ತಾನು ನೋಡಿಕೊಳ್ಳುವುದಾಗಿ ಈ ಖದೀಮ ಸಿಂಗ್ ತನ್ನ ಸ್ನೇಹಿತನಿಗೆ ಭರವಸೆ ಕೊಟ್ಟಿದ್ದ. ಅದಕ್ಕೆ ಅವರು ಸಹಮತ ಸೂಚಿಸಿದ್ದರು. ಯಾಕೆಂದರೆ ಆತನ ಮನೆಯಲ್ಲಿ ಪುರುಷರು ಯಾರೂ ಇಲ್ಲದಿರುವುದರಿಂದ, ತನ್ನ ಹೆಂಡತಿಗೆ ಸ್ವಲ್ಪ ಸಹಾಯವಾಗಲಿ ಎಂದು ಪತಿ ತನ್ನ ಮಿತ್ರ ಸಿಂಗ್‌ಗೆ ನೂತನ ಮನೆ ನಿರ್ಮಾಣದ ಜವಾಬ್ದಾರಿ ನೋಡಿಕೊಳ್ಳುವಂತೆ ತಿಳಿಸಿದ್ದರು.
ಮನೆ ಕಟ್ಟುವ ಜವಾಬ್ದಾರಿ ನೆಪದಲ್ಲಿ ಆಗಾಗ ಸ್ನೇಹಿತನ ಮನೆಗೆ ಬರುತ್ತಿದ್ದ ಪ್ರತಾಪ್ ಸಿಂಗ್, ಒಂದು ದಿನ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ್ದ. ಅಷ್ಟೇ ಅಲ್ಲ ತನ್ನ ಕಾಮಕೇಳಿಯ ಅಶ್ಲೀಲ ದೃಶ್ಯಗಳನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ. ನಂತರ ಅದನ್ನು ತನ್ನ ಸ್ನೇಹಿತರಿಗೆ ತೋರಿಸಿ ವಿಕೃತ ಖುಷಿ ಅನುಭವಿಸಿದ್ದ. ಆದರೆ ಆ ಸಿಡಿಯನ್ನು ಸುಟ್ಟು ಬಿಡುವಂತೆಯೂ ತನ್ನ ಗೆಳೆಯರಿಗೆ ಸಿಂಗ್ ಸಲಹೆ ಕೂಡ ಕೊಟ್ಟಿದ್ದ.
ಕಾಮ ಪುರಾಣ ಯಾರಿಗೆ ಬೇಡ, ಅಂತೂ ಸ್ನೇಹಿತನ ಪತ್ನಿ ಜೊತೆ ನಡೆಸಿದ ಕಾಮಕೇಳಿ ನಡೆಸಿದ ವಿಡಿಯೋ ದೃಶ್ಯಗಳು ಪಟ್ಟಣದಾದ್ಯಂತ ಹರಿದಾಡತೊಡಗಿತ್ತು. ತದನಂತರ ಆಕೆಯ ಮನೆಯ ಹಿರಿಯರು ಆ ಅಶ್ಲೀಲ ವಿಡಿಯೋ ದೃಶ್ಯಗಳನ್ನು ನೋಡಿದ ನಂತರ, ಕಾಮಿ ಸಿಂಗ್ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದರು.
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಕೊಟ್ಟ ದೂರನ್ನು ಸ್ವೀಕರಿಸಲಾಗಿದೆ. ಆ ಬಗ್ಗೆ ತನಿಖೆ ನಡೆಸುತ್ತಿದ್ದು, ಅದರಲ್ಲಿ ಎಷ್ಟು ಸತ್ಯಾಂಶ ಇದೆ ಎಂಬುದನ್ನು ಪತ್ತೆ ಹಚ್ಚುವುದಾಗಿ ರಮಣ್ ಸಿಂಗ್ ತಿಳಿಸಿದ್ದಾರೆ.