ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಡಿಎನ್ಎ ಹಾಗೂ ರಕ್ತದ ಮಾದರಿ ಪರೀಕ್ಷೆಗೆ ಇಲ್ಲಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.
ಮಾಜಿ ಸಚಿವ ಹಾಲಪ್ಪ ಅವರ ರಕ್ತ ಪರೀಕ್ಷೆಗೆ ಅನುಮತಿ ನೀಡುವಂತೆ ಕೋರಿ ಸಿಐಡಿ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಡಿಎನ್ಎ ಹಾಗೂ ರಕ್ತ ಮಾದರಿ ಪರೀಕ್ಷೆಗೆ ಅಸ್ತು ಎಂದಿದೆ.
ಏತನ್ಮಧ್ಯೆ ತಾವು ಹೈಕೋರ್ಟ್‌ನಲ್ಲಿ ಈ ಬಗ್ಗೆ ಮೇಲ್ಮನವಿ ಸಲ್ಲಿಸಲಿದ್ದು, ಅಲ್ಲಿಯವರೆಗೆ ಆದೇಶವನ್ನು ತಡೆಹಿಡಿಯಬೇಕೆಂದು ಕೋರಿ ಹಾಲಪ್ಪ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿಕೊಂಡರು. ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮೇ 24ರವರೆಗೆ ಆದೇಶವನ್ನು ಅಮಾನತಿನಲ್ಲಿ ಇಟ್ಟಿರುವುದಾಗಿ ತಿಳಿಸಿತು.
ಡಿಎನ್ಎ ಮತ್ತು ರಕ್ತ ಪರೀಕ್ಷೆಗೆ ಅನುಮತಿ ನೀಡಿರುವ ಕೆಳಕೋರ್ಟ್‌ನ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಹಾಲಪ್ಪ ಪರ ವಕೀಲ ಅಶೋಕ್ ಭಟ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಏತನ್ಮಧ್ಯೆ ಕೆಮ್ಮು, ನಿಶ್ಯಕ್ತಿಯಿಂದ ಬಳಲುತ್ತಿರುವ ಹಾಲಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಹಾಲಪ್ಪ ಜಾಮೀನು ಯಾವಾಗ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಒಟ್ಟಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಲಪ್ಪ ಅವರಿಗೆ ದಿನಕ್ಕೊಂದು ಖಾಯಿಲೆ ಅಂಟಿಕೊಳ್ಳುತ್ತಿರುವುದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.