ಮಾನಸಿ. ಈ ಹೆಸರು ಕೇಳಿದರೆ ಎಲ್ಲೋ ಕೇಳಿದ್ದೀವಲ್ಲಾ ಅನ್ನೋ ಅನುಮಾನ ಬರೋದಂತೂ ಖಂಡಿತ. ಹೌದು. ಈಕೆ ಕಳೆದ ವರ್ಷ ಬಿಡುಗಡೆಯಾದ ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಾಲ್ಕು ನಾಯಕಿಯರ ಪಾತ್ರದಲ್ಲಿ ಇವಳು ಒಬ್ಬಳು. ಆದರೆ ಈಕೆ ಚಿತ್ರರಂಗದಲ್ಲಿ ಅಷ್ಟು ಗುರುತಿಸಿಕೊಂಡಿಲ್ಲ.
ಮೊಗ್ಗಿನ ಮನಸ್ಸು ಚಿತ್ರದಲ್ಲಿ ಇವಳ ಜೊತೆ ನಟಿಸಿರುವ ಶುಭಾ ಪುಂಜಾ ಮತ್ತು ರಾಧಿಕಾ ಪಂಡಿತ್ ಚಿತ್ರಗಳು ಬಿಡುಗಡೆಯಾಗಿ ಬಾರಿ ಸುದ್ದಿ ಕೂಡ ಮಾಡಿದ್ದಾರೆ. ಹಾಗೆ ಹಲವು ಆಫರ್‌ಗಳೂ ಅರಸಿ ಬರುತ್ತಿವೆ. ಆದರೆ ಅದೇನು ದುರಾದೃಷ್ಟವೋ...ಮಾನಸಿಯನ್ನು ಮಾತ್ರ ಪ್ರೇಕ್ಷಕ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಇವಳ ಅಭಿನಯದ ಬ್ಲ್ಯಾಕ್ ಅನ್ನೋ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಮೊಗ್ಗಿನ ಮನಸ್ಸು ಚಿತ್ರಕ್ಕಿಂತ ಮೊದಲೇ ಬಿಡುಗಡೆಯಾಗಬೇಕಿತ್ತು. ಆದರೆ ಏನು ಕಾರಣವೋ ಗೊತ್ತಿಲ್ಲ. ಚಿತ್ರಕ್ಕೆ ಈಗ ಬಿಡುಗಡೆ ಭಾಗ್ಯ ದೊರೆತಿದೆ. ಈ ವಾರ ಚಿತ್ರ ತೆರೆ ಕಾಣಲಿದೆ.
ಈಕೆ ಹಾಗೆ ಸುಮ್ಮನೆ ಚಿತ್ರದಲ್ಲಿ ಒಂದು ಪುಟ್ಟ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೂರ್ಣ ಪ್ರಮಾಣದ ನಟಿಯಾಗಿ ಬ್ಲಾಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಲ್ಯಾಕ್ ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯುವ ತಂಡದ ಸದಸ್ಯೆ ಮಾನಸಿ. ಸರಳ ಚಿತ್ರಕತೆ ಇದ್ದರೂ ಭಿನ್ನವಾಗಿ ವಿಶಿಷ್ಟವಾಗಿ ಮೂಡಿ ಬಂದಿದೆ ಅಂತಾರೆ ನಾಯಕಿ ಮಾನಸಿ. ಹಾಗೆ ಈಕೆ ಹಾಲಿವುಡ್ ಮತ್ತು ಶಿವಮಣಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಾದರು ಮಾನಸಿಗೆ ಯಶಸ್ಸು ಸಿಗಲಿ.